ಬಿಲ್ಲವರು ಮತ್ತು ಜಾತಿಗಿರುವ ಉಪನಾಮಗಳು

Billavaru mattu jatigiruva upanamagalu

Post date: 2020-09-03
ಬಿಲ್ಲವರು ಮತ್ತು ಜಾತಿಗಿರುವ ಉಪನಾಮಗಳು
Avatar

Shailu Birva Agattadi Dola Baarike

ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

ಬಾಕಿಲ ಗುತ್ತು


Recent Posts:

Share this post

ಬಿಲ್ಲವರು ಮತ್ತು ಜಾತಿಗಿರುವ ಉಪನಾಮಗಳು

ತುಳುನಾಡಿನ ಮೂಲ ಜನಾಂಗಗಳ ಬಗ್ಗೆ ಕೆದಕಲು ಹೊರಟಾಗ ಮೇಲ್ಪಂಕ್ತಿಯಲ್ಲಿ ನಿಲ್ಲುವವರು ಬಿಲ್ಲವ ಜನಾಂಗ. ಇದಕ್ಕೆ ಪೂರಕವಾಗಿ ದೈವಗಳ ಪಾರ್ದನದಲ್ಲಿ ಪೂರಕ ಮೌಖಿಕ ದಾಖಲೆ ಸಿಗುತ್ತವೆ.ಒಂದೊಮ್ಮೆ ತುಳುನಾಡಿನ ಹೆಚ್ಚಿನ ದೈವಗಳು ಬಿಲ್ಲವರ ಭಕ್ತಿಗೆ ಮತ್ತು ಮುಗ್ಧತೆಗೆ ಮೆಚ್ಚಿ ಬೆಂಬತ್ತಿ ಬಂದವುಗಳೇ ಆಗಿದೆ. ತುಳುನಾಡಿನ ಸಂಸ್ಕ್ರತಿಗೆ ಬಿಲ್ಲವರ ಕೊಡುಗೆ ಅನಂತವಾಗಿರುವಂತದ್ದು. ಒಂದೊಮ್ಮೆ ಭವ್ಯತೆಯಿಂದ ಮೆರೆದವರು ಕಾಲನ ಕೈಗೆ ಮತ್ತು ಹೊರಗಿನವರ ದಾಳಿಗೆ ತುತ್ತಾಗಿ ತಮ್ಮ ಅಸ್ಥಿತ್ವವನ್ನೇ ಕಳಕೊಂಡು ಪರಕೀಯರಾದವರು. ಆದರೆ ಒಂದು ಕಾಲದಲ್ಲಿ ತಮ್ಮ ನ್ಯಾಯಪರತೆ, ಸತ್ಯಸಂಧತೆ ಮತ್ತು ತಾವು ಮಾಡುವ ಕಾಯಕದ ಮುಖಾಂತರ ತಮ್ಮನ್ನು ಬೇರೆ ಬೇರೆ ಹೆಸರಿನಿಂದ ಕರೆಸಿಕೊಂಡು ಗೌರವಿಸಲ್ಪಟ್ಟವರು. ಕಾಡೇ ಸಂಪತ್ತಾಗಿದ್ದ ಸಮಯದಲ್ಲಿ ಕಾಡಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಬಿಲ್ಲವರು ಪ್ರಕೃತಿ ಆರಾಧಕರಾಗಿದ್ದ ಸಮಯದಲ್ಲಿ ಕಾಡಿನ ಇಂಚಿಂಚು ಇವರಿಗೆ ಪರಿಚಯವಿತ್ತು. ಅದೇ ರೀತಿಯಾಗಿ ಜನಾಂಗಗಳು ಪ್ರಾರಂಭವಾಗಿದ್ದೆ ಕಾಡಿನೊಂದಿಗೆ. ಈ ರೀತಿಯಾಗಿ ಗಿಡ ಮೂಲಿಕೆ, ಗೆಡ್ಡೆ ಬೇರುಗಳ ಪರಿಚಯ ಮತ್ತು ಅವುಗಳ ವೈಶಿಷ್ಟದ ಬಗ್ಗೆ ಅರಿವಿದ್ದ ಸಮುದಾಯ ವೈದ್ಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬೈದ್ಯರೆನಿಸಿಕೊಂಡರು. ಇದಕ್ಕೆಲ್ಲ ಆಧಾರ ದೈವಾರಾಧನೆಯಲ್ಲಿ ಬರುವಂತಹ ದೇಯಿ ಬೈದೆತಿ, ಅಮೆತ್ತೋಡು ಆನೆ ಬೈದ್ಯ, ಬಿರ್ಮಣ್ಣ ಬೈದ್ಯ, ಸಿದ್ದ ಮರ್ದ ಬೈದ್ಯ ಮತ್ತು ಅಡೂರು ದೇರೆ ಬೈದ್ಯ ಎನ್ನುವಂತಹ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡ ಪಾತ್ರಗಳು.

ದೇಯಿ ಬೈದೆತಿ ಕೊಡುವಂತಹ ಮದ್ದಿನ ಬಗ್ಗೆ ಬೂಡು ಬೊಮ್ಮಯ್ಯ ಕುಜುಂಬ ಮುದ್ಯ ಬಲ್ಲಾಳನಿಗೆ ಈಗೆ ವಿವರಿಸುತ್ತಾನೆ – “ಆಮಂದ ಅಜೆ ವಾಮಂದ ಸಾಲೆಡ್ ಸಂಕಲೆ ರಾವು ಬೀದಿ ಪಡೆಕೋಟೆ ಏರಾಜೆ ಬರ್ಕೆಡ್ ಸಾಯನ ಬೈದ್ಯನ ತಂಗಡಿ ಕರ್ಗಲ್ಲ ತೋಟ ಕಾಂತಣ್ಣ ಬೈದ್ಯನ ಬುಡೆದಿ ದೇಯಿ ಬೈದೆತಿ ಕೊರ್ಪಿನ ಮರ್ದ್ ಎಡ್ಡೆಯೆ ಪನ್ಪಿನ ಮಂತ್ರ ಎಡ್ಡೆಯೆ ಅರೆ ಘಳಿಗೆ ಕಣ್ಣು ಮುಚ್ಚಿನಾಯನ್ ಲಕ್ಕವಳಿಯೆ”. ಇದೆಲ್ಲ ಆ ಕಾಲದಲ್ಲಿ ಅವರು ತಮ್ಮ ಕಾಯಕದ ಮೂಲಕ ಪ್ರಚಾರಕ್ಕೆ ಬಂದವರು. ಇಲ್ಲಿ ವೃತ್ತಿಗೆ ಸಂಬಂಧಪಟ್ಟ ಹಾಗೆ ಬೈದ್ಯ ಎನ್ನುವ ಪದ ಬಳಕೆಯಾಗಿದ್ದರೂ ಕೂಡ ಪಾರ್ದನಗಳಲ್ಲಿ ಅದು ಜಾತಿ ಸೂಚಕವಾಗಿ ಬಳಕೆಯಾಗಿದೆ. ಅದೇ ರೀತಿಯಲ್ಲಿ ಆದಿ ದ್ರಾವಿಡ ಸಮುದಾಯ ಇವತ್ತಿಗೂ ಬಿಲ್ಲವರನ್ನು ಬೈದ್ಯರು ಎಂದೇ ಸಂಬೋದಿಸುತ್ತಾರೆ. ಇದು ಅವರಿಗೂ ಮತ್ತು ಬಿಲ್ಲವರಿಗೂ ಇರುವ ಅನನ್ಯ ಸಂಬಂಧವನ್ನು ಸೂಚಿಸುತ್ತದೆ. ಅದೇ ರೀತಿ ನಾಟಿ ವೈದ್ಯ ವಿದ್ಯೆಯಲ್ಲಿ ಶೇಂದಿ ಒಂದು ಔಷದದ ಪಟ್ಟಿಯಲ್ಲಿ ಪಾಲು ಪಡೆದುಕೊಂಡಿರುವುದರ ಹೊರತಾಗಿ ಅದು ಅಮಲಿನ ವಸ್ತುವಾಗಿ ಪರಿಗಣಿಸಿಕೊಂಡಿಲ್ಲ. ಅಲ್ಲದೆ ಕಾಡಿನಲ್ಲೇ ವಾಸವಿದ್ದ ಈ ಸಮುದಾಯಕ್ಕೆ ಯಾವ ಬೇರಿನಲ್ಲಿ, ಯಾವ ಕಾಯಿಯಲ್ಲಿ, ಯಾವ ಕಾಂಡದಲ್ಲಿ ಎಂತಹ ವೈಶಿಷ್ಟ್ಯ ಇದೆ ಎಂದು ತಿಳಿದಿರುವುದರಿಂದ ಶೇಂದಿ ವೈದ್ಯ ಪದ್ಧತಿಯಲ್ಲಿ ಆಗಿನ ಕಾಲದಲ್ಲಿ ಅರವಳಿಕೆ ರೀತಿಯಲ್ಲಿ ಬಳಕೆಯಾಯಿತು. ಆ ಕಾಲದಲ್ಲಿ ವೈದ್ಯ ವೃತ್ತಿಯವರು ಮಾತ್ರ ಶೇಂದಿಯನ್ನು ತೆಗೆಯುತ್ತಿದ್ದರು. ಆದುದರಿಂದ ಶೇಂದಿ ತೆಗೆಯುವವರಿಗೆ ಬೇರೆಯೆ ಒಂದು ಹೆಸರಿನೊಂದಿಗೆ ಕರೆಯುವ ಸಂಪ್ರದಾಯವಿರಲಿಲ್ಲ. ಯಾಕೆಂದರೆ ಅದು ಒಂದು ವೃತ್ತಿಯಾಗಿ ಪರಿಗಣಿತವಾಗಿಲ್ಲ ಮತ್ತು ಕೆಲವೇ ಮಂದಿ ಮಾಡುತ್ತಿದ್ದ ಕೆಲಸವಾಗಿದ್ದರಿಂದ ಮತ್ತು ಒಂದಿಬ್ಬರು ಒಂದು ಉದ್ದೇಶಕ್ಕೆ ಬೇಕಾಗಿ ಮಾಡುವ ಕೆಲಸವಾಗಿದ್ದುದರಿಂದ ಅದಕ್ಕೆ ಒಂದು ಜಾತಿಯ ಹೆಸರಿಟ್ಟು ಕರೆಯುವ ವಾಡಿಕೆ ಇರಲಿಲ್ಲ. ಆದುದರಿಂದ ಬಿಲ್ಲವರಿಗೆ ಇಂತಹುದೆ ವೃತ್ತಿ ಮಾಡುವರೆಂಬ ಸೀಮಿತ ಚೌಕಟ್ಟು ಇರಲಿಲ್ಲ. ಎಲ್ಲದರಲ್ಲೂ ಜ್ಞಾನ ಹೊಂದಿದವರೇ ಆಗಿದ್ದರು. ಅದಕ್ಕಿಂತಲೂ ಎತ್ತರದ ಸ್ಥರದಲ್ಲಿ ಬಿಲ್ಲವರು
ತುಳುನಾಡನ್ನು ವ್ಯಾಪಿಸಿಕೊಂಡಿದ್ದರು.

ಹುಪಾಲು ಉದರ ಪೋಷಣೆಗೆ ಕೃಷಿಯನ್ನೇ ಅವಲಂಬಿಸಿದ್ದ ಜನ ಸಮುದಾಯಕ್ಕೆ ಮುಂದಾಳತ್ವ ವಹಿಸಿದವರು ಬಿಲ್ಲವರು. ಯಾವ ಸಮಯದಲ್ಲಿ ಯಾವ ರೀತಿಯ ಬೆಳೆ ಬೆಳೆದರೆ ಉತ್ತಮ ಎನ್ನುವ ಮಾಹಿತಿ ಇದ್ದ ಬಿಲ್ಲವರು, ರಾಜಾಶ್ರಯದಲ್ಲಿ ನಟ್ಟಿಲ ಬರ್ಕೆ ಎನ್ನುವ ಗೌರವವನ್ನು ರಾಜರಿಂದ, ಬಲ್ಲಾಳರಿಂದ ಪಡೆದುದು ತುಳುನಾಡಿನಲ್ಲಿ ಬಿಲ್ಲವರು ಮಾತ್ರ. ಬಹುಷ ಇದು ಬಿಲ್ಲವರಿಗೆ ಪ್ರಕೃತಿಯೊಂದಿಗೆ ಇದ್ದಂತಹ ಅಪ್ಯಾಯಮಾನತೆಯನ್ನು ಪರಿಗಣಿಸಿ ಬಿಲ್ಲವರ ಕೆಲವು ಮನೆಗಳಿಗೆ ನೀಡಿದ ಮನ್ನಣೆ ಆಗಿರಬೇಕು. ಬೋಂಟ್ರ ಎನ್ನುವ ಮರ್ಯಾದೆಯು ಕೂಡ ಬಿಲ್ಲವರಿಗೆ ಮಾತ್ರ ಸಲ್ಲುವ ಒಂದು ಕಾಲದ ರಾಜಾಶ್ರಯದ ಗೌರವ ಆಗಿತ್ತು. ರಾಜರ ಆಡಳಿತ ಕಾಲದಲ್ಲಿ ಕೃಷಿ ಸಂಪತ್ತಿಗೆ ತೊಂದರೆ ಮಾಡುತ್ತಿದ್ದ ಕಾಡುಪ್ರಾಣಿಗಳನ್ನು ನಿವಾರಿಸಲು ಬಿಲ್ಲವರ ಕೆಲವು ಮನೆಗಳಿಗೆ ಬೋಂಟ್ರ ಎನ್ನುವ ಬಿರುದು ಆಧಾರಿತ ಗೌರವ ಇತ್ತು. ಈ ಬೋಂಟ್ರ ಮನೆಯವರು ಬೇಟೆಯ ನೈಪುಣ್ಯವನ್ನು ತಿಳಿದವರಾಗಿದ್ದು, ರಾಜರ ಆಜ್ಞೆಯಂತೆ ಬೇಟೆಯ ಮುಂದಾಳತ್ವ ವಹಿಸಿ ಊರಿಗೆ ಉಪಟಳ ಕೊಡುತ್ತಿದ್ದ ಕಾಡುಪ್ರಾಣಿಗಳನ್ನು ನಿವಾರಿಸುತ್ತಿದ್ದರು. ಇಲ್ಲಿ ಕೂಡ ಈ ರೀತಿಯಾಗಿ ಕೆಲವು ಬಿಲ್ಲವ ಮನೆಗಳನ್ನು ಆಯ್ಕೆ ಮಾಡಲು ಕಾರಣ ಆಗಿನ ಕಾಲದಲ್ಲಿ ಬಿಲ್ಲವ ಬೇಟೆ ವಿಶಾರಾದರಾಗಿದ್ದೆ ಈ ಬೋಂಟ್ರ ಎನ್ನುವ ಮನ್ನಣೆ ಸಿಗಲು ಕಾರಣ. ಅದೇ ರೀತಿಯಲ್ಲಿ ಎಲ್ಲಾ ರಾಜರುಗಳು ಬೇಟೆಯಲ್ಲಿ ನೈಪುಣ್ಯ ಪಡೆದಿರುವುದನ್ನು ನೋಡುವಾಗ ಇದೇ ಬೋಂಟ್ರ ಮನೆತನಗಳು ಆಡಳಿತಗಾರರಾಗಿ ಮಾರ್ಪಾಡು ಹೊಂದಿದ್ದಾರೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಅಧ್ಯಯನಗಳು ಈ ವಿಷಯದ ಮೇಲೆ ನಡೆಯಬೇಕಾಗಿದೆ. ಇವತ್ತಿಗೂ ಅದೆಷ್ಟೋ ಬೋಂಟ್ರ ಮನೆತನಗಳು ಜನಮಾನಸದಲ್ಲಿ ಗೌರವದ ಸ್ಥಾನವನ್ನು ಪಡೆದಿದೆ. ಉದಾಹರಣೆಗೆ ಕಳ್ಯ ಕೈರಬೊಟ್ಟು ಬೋಂಟ್ರ ಮನೆತನ, ನಿಟ್ಟೆ ದಡ್ಡೋಡಿ ಬೋಂಟ್ರ ಮನೆತನಗಳು. ಕಳ್ಯ ಕೈರಬೊಟ್ಟು ಬೋಂಟ್ರ ಮನೆತನದ ಒಬ್ಬ ಹಿರಿಯರು
ಅಂದಿನ ಈಸ್ಟ್ ಇಂಡಿಯಾ ಕಂಪೆನಿಗೆ ತುಳುನಾಡಿನಲ್ಲಿ 1001 ರೂ ತೆರಿಗೆ ನೀಡಿದ ಮೊದಲನೆಯ ವ್ಯಕ್ತಿ ಆಗಿದ್ದರು. ಇವರು ಬಿ (ಬೊಳ್ಳಿ) ಬಣ್ಣದ ಕುದುರೆಯಲ್ಲಿ ತಲೆಗೆ ರಾಜ ಠೀವಿಯ ಮುಂಡಾಸು ಕಟ್ಟಿ ತಿರುಗಾಡುತ್ತಿದ್ದವರು. ಅಂತಹ ಮರ್ಯಾದೆಯನ್ನು ಹೊಂದಿದವರು.

ಬಿಲ್ಲವ ಜನಾಂಗ ಪ್ರಾರಂಭವಾಗಿದ್ದೇ ಕಾಡಿನೊಂದಿಗೆ. ಆ ಕಾಲದಲ್ಲಿ ಆಹಾರ ಬೇಟೆಗೆ ಮತ್ತು ಆತ್ಮ ರಕ್ಷಣೆಗೆ ಪ್ರಥಮವಾಗಿ ಬಿಲ್ಲು ಬಾಣದ ಬಳಕೆ ಬಂದಿರುವುದರಿಂದ ಅದರ ಹೆಚ್ಚಿನ ಬಳಕೆ ಮಾಡಿ ಬಿರ್ವರೆನಿಸಿಕೊಂಡರು. ಕನ್ನಡದಲ್ಲಿ ಬಿರ್ವ ಎನ್ನುವ ಶಬ್ಧ ಬಿಲ್ಲವ ಎನಿಸಿಕೊಂಡಿತು. ಬಿರುವೆ ಅಥವಾ ಬಿರ್ವ ಎನ್ನುವ ಪದಗಳು ಇಲ್ಲಿ ಎರಡು ರೀತಿಯಲ್ಲಿ ಬಳಕೆಯಾಗಿದೆ. ಬೀರ ಅಥವ ವೀರ ಎನ್ನುವ ಪದ ಬಳಕೆಯಾದರೆ, ಇನ್ನೊಂದು ಬಿಲ್ಲು ಬಾಣ ಹಿಡಿದು ಹೋರಾಟ ಮಾಡಿದವ, ಅಂದರೆ ರಾಜರ ದಳವಾಯಿಯಾಗಿ, ಮಂತ್ರಿಗಳಾಗಿ, ಸೈನಿಕರಾಗಿ, ಅದೇ ರೀತಿ ಸ್ವತ: ಬಲ್ಲಾಳರಾಗಿ ಆಡಳಿತ ಮಾಡಿದವರು. ಬಿಲ್ಲವರ ರಾಜ ಮನೆತನಗಳಾಗಿ ಉಚ್ಚಿಲ ಅಂಬಾಡಿ ಬೀಡು, ಅಗರಿ ಗುತ್ತು ಇವೆಲ್ಲ ಒಂದು ಕಾಲದಲ್ಲಿ ಬಿಲ್ಲವರ ವೀರತ್ವದ ಪ್ರತೀಕವಾಗಿ ಪ್ರಕಾಶಿಸಿದವುಗಳು. ಬಿಲ್ಲವ ದಳವಾಯಿಗಳಾಗಿ ಮಿಂಚಿದವರು ಕೌಡೋಡಿ ಬೊಳ್ಳಕ್ಕು ಬೈದೆತಿ, ದಳವಾಯಿ ದೇರೆ ಬೈದ್ಯ, ಸುಜೀರ್ ದೇಯಿ ಬೈದೆತಿ, ದಂಡು ದೇವು ಬೈದ್ಯ ಮತ್ತು ದಳವಾಯಿ ದುಗ್ಗಣ್ಣ ಬೈದ್ಯ ಇವರೆಲ್ಲ ದೇದಿಪ್ಯಮಾನವಾಗಿ ಹೊಳೆಯುವ ಬೂದಿ ಮುಚ್ಚಿದ ಕೆಂಡಗಳು. ಜನರ ಅಸಡ್ಡೆ ಮತ್ತು ಉಳ್ಳವರ ಮತ್ತು ಇಲ್ಲದವರ ಮಧ್ಯೆ ಬಿಟ್ಟ ಬಿರುಕು ಎಲ್ಲವನ್ನು ಮುಚ್ಚಿ ಹಾಸುಗಲ್ಲನ್ನು ಹಾಸಿ ಆಗಿದೆ. ಇದೇ ರೀತಿಯಲ್ಲಿ ಇನ್ನೊಂದು ವಿಶ್ಲೇಷಣೆಯು ಬಿರುವ ಪದದ ಬಗ್ಗೆ ಇದೆ. ಉತ್ತರ ಭಾರತದಲ್ಲಿ ಬಿರು ಎಂದರೆ ಯಕ್ಷ ಅಥವ ಬ್ರಹ್ಮ ಎನ್ನುವ ಅರ್ಥ. ಅಂದರೆ ಜನಸಾಮಾನ್ಯರು ಅಲ್ಲಿ ಬ್ರಹ್ಮನನ್ನು ಬಿರು ಎಂದು ಪೂಜೆ ಮಾಡುತ್ತಾರೆ. ಅದುವೆ ತುಳುನಾಡಿನಲ್ಲಿ ಬೆಮ್ಮರನ್ನು (ಬೆರ್ಮೆರ್) ಆರಾಧಿಸುವವರು ಅಥವಾ ಪೂಜೆ ಮಾಡುವವರು ಬಿರುವರು ಎಂದು ಹೆಸರು ಪಡೆದರು ಎನ್ನುವ ವಾದವು ಇದೆ. ಅದರಿಂದಲೆ ಈ ಬೆರ್ಮರನ್ನು ಆರಾಧನೆ ಮಾಡಿದುದರಿಂದಲೇ ಬಿಲ್ಲವರು ಬಿರ್ಮು, ಬಿರ್ಮಣ್ಣ, ಮೊಮ್ಮಯೆ, ಬೆರ್ಮಣೆ, ಬಿರ್ಮಣೆ, ಬೀಡಿನ ಬೊಮ್ಮಯ, ಬೀರು ಬಿರ್ಮಣ, ಬಿರ್ಮರನ್ನಾಯ ಎನ್ನುವ ಹೆಸರುಗಳನ್ನು ಹೆಚ್ಚಾಗಿ ಇಟ್ಟುಕೊಳ್ಳುತ್ತಿದ್ದರು. ಇನ್ನು ಕೆಲವು ಕಡೆಗಳಲ್ಲಿ ಬಳಕೆಯಲ್ಲಿರುವುದು ನಾಕ, ನಾಯಗ ಎನ್ನುವ ಪದ ಬಳಕೆ. ಇಲ್ಲಿ ಕೂಡ ಬಿಲ್ಲವ ಸಮುದಾಯ ಅರಸೊತ್ತಿಗೆ ಬರುವುದಕ್ಕಿಂತ ಮುಂಚೆ ನಾಯಕ ಸ್ಥಾನದಲ್ಲಿ ಸಮುದಾಯದಲ್ಲಿ ಗುರುತಿಸಿಕೊಂಡಿರುವುದರ ಪಳೆಯುಳಿಕೆ ಆಗಿದೆ ಈ ನಾಕ ಎನ್ನುವ ಪದ. ಇಂದಿಗೂ ನಾಯಗರ ಪಟ್ಟ ಎನ್ನುವುದು ಮುಲ್ಕಿ ಮತ್ತು ಆಚೆ ಈಚೆ ಸೀಮೆಗಳಲ್ಲಿ ಪ್ರಚಲಿತದಲ್ಲಿದೆ. ಇದು ಅರಸು ಪಟ್ಟಕ್ಕೆ ಸಮಾನವಾದ ಪಟ್ಟವಾಗಿದೆ. ಕಾಂತಬಾರೆ ಬೂದಾಬಾರೆಯವರ ಕಾಲದಲ್ಲೇ ಕೊಲ್ಲೂರ ಗುಡ್ಡೆಸಾನ ಅಂತಪ್ಪ ನಾಯ್ಗರಿಗೆ ಪಟ್ಟವಾದ ಉಲ್ಲೇಖವಿದೆ. ಇಂದಿಗೂ ಬಿಲ್ಲವರಲ್ಲಿ ನಾಯ್ಗೆರ್ ಎನ್ನುವ ಗಡಿ ಪಟ್ಟವಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎರ್ಮಾಳ್ ಗರಡಿ ನಾಯ್ಗೆರ್, ಕೊಲ್ಲೂರ ಗುಡ್ಡೆಸಾನ ಅಂತಪ್ಪ ನಾಯ್ಗೆರ್, ಹಳೆಯಂಗಡಿ ಕೊಪ್ಪಳ ಬಂಕಿ ನಾಯ್ಗೆರ್, ಮಾಗಂದಡಿ ಕಾರ್ನಾಡ್ ಧರ್ಮಸಾನ ಗೋಪಾಲ ನಾಯ್ಗೆರ್. ಮಾಯಂದಾಲ್ (ಮಾಣಿ ಬಾಲೆ) ಕಥಾನಕದಲ್ಲಿ ತಣ್ಣಿ ಮಾನಿಗ (ಮುಗೇರ ಸತ್ಯಗಳೊಂದಿಗೆ ಆರಾಧಿಸಲ್ಪಡುವ ಮಾತೃ ಸ್ವರೂಪಿ ಸತ್ಯ) ಎನ್ನುವ ಮುಗೇರ ಸಮುದಾಯದ ಹೆಣ್ಣು ಮಗಳು ಕುಂಬಾಡಿ ಆಲಿಬಾಗ ನಾಯಕನನ್ನು (ಮಾಣಿ ಬಾಲೆಯ ಸೋದರ ಮಾವ) ನಾಕ ಎಂದು ಸಂಭೋದಿಸುವ ಉಲ್ಲೇಖ ಇದೆ.

ಬಿಲ್ಲವರು ದೈವಗಳ ಉಪಾಸಕರಾಗಿದ್ದುದರಿಂದ ಮತ್ತು ತಾಂತ್ರಿಕ ವಿದ್ಯೆಗಳಲ್ಲೂ ಪರಿಣತರಾಗಿದ್ದುದರಿಂದ ತುಳುನಾಡಿನ ಹೆಚ್ಚಿನ ದೈವಗಳು ಬಿಲ್ಲವರ ಭಕ್ತಿಗೆ ಮೆಚ್ಚಿ ಬಂದು ಇವರಿಂದ ಆರಾಧನೆ ಪಡೆದುಗೊಂಡಿದ್ದು, ಇದರಿಂದಾಗಿ ಬಿಲ್ಲವರು ದೈವಗಳ ಅರ್ಚಕರಾಗಿ ನೇಮಕಗೊಂಡು ಪೂಜಾರಿಗಳೆನಿಸಿಕೊಂಡರು. ಉದಾಹರಣೆ ಜಾನು ಬೈದ್ಯ, ತಂಕರು ಬೈದ್ಯ, ಕುಪ್ಪೆ ಕೋಟಿ ಬೈದ್ಯ, ಜಾರದ ಅಬ್ಬು ಬೈದ್ಯೆತಿ, ಮೈರಕ್ಕೆ ಬೈದೆತಿ, ಇಂಗಡ್ ದೇರೆ ಬೈದ್ಯ, ಕರಿಯ ಕಾಂತು ಬೈದ್ಯ ಇವರೆಲ್ಲರು ದೈವಗಳ ಕೃಪಕಟಾಕ್ಷಕ್ಕೆ ಒಳಗಾದವರು ಮತ್ತು ದೈವಗಳು ಇವರಿಂದ ಆರಾಧಿಸಲ್ಪಟ್ಟವು. ತುಳುನಾಡಿನಲ್ಲಿ ಬೇರೆ ಬೇರೆ ಹೆಸರಿನೊಂದಿಗೆ ಕರೆಯಿಸಲ್ಪಡುವರು ಬಿಲ್ಲವರು ಮಾತ್ರ. ತಮ್ಮದೇ ಆದ ಸಂಸ್ಕ್ರತಿ, ಸಂಪ್ರದಾಯಗಳನ್ನು ಪಾಲಿಸಿಕೊಂಡು ತುಳುನಾಡಿನ ಮೂಲ ಜನಾಂಗದಲ್ಲಿ ಒಬ್ಬರಾಗಿ ಹೆಸರು ಪಡೆದುಕೊಂಡು ಇವತ್ತಿಗೂ ಆ ಸಂಪ್ರದಾಯಗಳನ್ನು ಉಳಿಸಿಕೊಂಡವರಲ್ಲಿ ಬಿಲ್ಲವರು ಮೊದಲಿಗರು. ತಮ್ಮ ಸ್ಥಾನಮಾನಗಳಿಂದಲೇ ಸಮಾಜದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು ಮತ್ತು ಕಾಲದ ಹೊಡೆತಕ್ಕೆ ಸಿಕ್ಕಿ ಎಲ್ಲವನ್ನು ಕಳೆದುಕೊಂಡವರಲ್ಲಿ ಮೊದಲಿಗರು ಇವರೇ. ಭವ್ಯ ಸಂಸ್ಕ್ರತಿ ಹೊಂದಿದ ಬಿಲ್ಲವ ಸಮುದಾಯ ತುಳುನಾಡಿನ ಉದ್ದಗಲಕ್ಕೂ ವ್ಯಾಪಿಸಿ ತಾಯಿಯ ಕಟ್ಟನ್ನು (ಅಳಿಯ ಸಂತಾನ ಕಟ್ಟ್ - ಮಾತೃ ಪ್ರಧಾನ) ಪರಿಚಯಿಸಿದವರು. ಆದರೆ ಪುರುಷ ಪ್ರಧಾನ ಸಮಾಜ ಅದನ್ನು ಅಳಿಯ ಕಟ್ಟಿಗೆ ಮಾರ್ಪಾಡು ಪಡಿಸಿ, ಸಮಾಜದಲ್ಲಿ ಎಲ್ಲೋ ಒಂದು ಕಡೆ ಸಮಾನತೆ ಎನ್ನುವ ಪದದ ಅರ್ಥವನ್ನು ತಿರುಚುವ ಪ್ರಯತ್ನಗಳು ನಡೆದವು. ಆದರೆ ಅದೆನ್ನೆಲ್ಲ ಮೆಟ್ಟಿ ಬಿಲ್ಲವ ಸಮಾಜ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಂಡು ಬಂದಿದೆ.

ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

Share this post

Recent Posts:

Share this post

Facebook Twitter Whatsapp Linkedin