ಬೈದ್ಯರು ಮತ್ತು ತುಳುನಾಡ ದೈವಗಳು

Baidyaru Mattu Tulunada Daivagalu

Post date: 2021-07-06
ಬೈದ್ಯರು ಮತ್ತು ತುಳುನಾಡ ದೈವಗಳು
Avatar

ChandraShekar K

ಚಂದ್ರಶೇಖರ್ ಕೆ

ಚಂದುನ ಬರವು


Recent Posts:

Share this post

ಬೈದ್ಯರು ಮತ್ತು ತುಳುನಾಡ ದೈವಗಳು

ನಾಗ ಮಣ್ಣಿನ ತುಳುನಾಡಿನ ಉದ್ದಗಲಕ್ಕೂ ಹರಡಿಕೊಂಡಿರುವ‌ ಒಂದು ಬಲಿಷ್ಟ ಜನಾಂಗ ಎ‌ಂದರೆ ಅದು ಬಿಲ್ಲವ ಜನಾಂಗ.ಬಿರುವ,ಪೂಜಾರಿ ಎಂದು ಕರೆಯುವ ಈ ಜನಾಂಗಕ್ಕೆ ಅಚ್ಚ ತುಳುವಿನಲ್ಲಿ ಬೈದ್ಯರು ಎಂದು ಕರೆಯುತ್ತಾರೆ. ಅಂದ್ರೆ ಕನ್ನಡದ ನಾಟಿ ವೈದ್ಯ,ಆಯುರ್ವೇದದ ನಾರು, ಬೇರು, ಚಿಗುರು,ಬಳ್ಳಿ,ಸೊಪ್ಪು,ಕೆತ್ತೆ,ಕಾಳುಗಳನ್ನು ಬಳಸಿ ಮದ್ದಿನ ವೃತ್ತಿ ಮಾಡಿದ ಜನಾಂಗಕ್ಕೆ ತುಳುವಿನಲ್ಲಿ ಬೈದ್ಯರು ಎಂದು ಕರೆದರು‌‌. ಹಾಗೆಂದ ಮಾತ್ರಕ್ಕೆ ಇವರ ಮೂಲ ವೃತ್ತಿ ಬೈದ್ಯಕ್ಕಿಂತಲೂ ಕೃಷಿ ಬದುಕು. ಸಾಗುವಳಿ,ನಾಟಿ ಬೇಸಾಯದ ಜತೆ ನಟ್ಟಿ ತರಕಾರಿಗಳನ್ನು ಸಾಮಾನ್ಯವಾಗಿ ಬೆಳೆಯುತ್ತಿದ್ರು.ಬೇಟೆಗಾರಿಕೆ,ಹಳ್ಳಿಯ ಮೀನು ಹಿಡಿಯುವ ಹವ್ಯಾಸ ವೃತ್ತಿಯನ್ನು ಕೂಡ ಮಾಡುತ್ತಿದ್ರು. ಕೋಳಿ,ನಾಯಿ,ಬೆಕ್ಕು,ಹಂದಿ,ದನಕರುಗಳು ಇನ್ನಿತರ ಪ್ರಾಣಿಗಳ ಹೈನುಗಾರಿಕೆ ಮಾಡುತ್ತಿದ್ದ ಜನಾಂಗ ಕಾಡಿನ ಮರ, ಸಸ್ಯ, ಬಳ್ಳಿ, ಬೇರು, ಗೆಡ್ಡೆಗಳ, ತಿಳುವಳಿಕೆ ಇದ್ದುದರಿಂದ ಬೈದ್ಯ ಕೆಲಸವನ್ನು ಮಾಡಿದರು. ತುಳುನಾಡಿನಲ್ಲಿ ಬಾರೀಕೆಯೆ ಮುಂದಕ್ಕೆ ಬರ್ಕೆ ಅಯಿತು.ಅನಾದಿಕಾಲದಿಂದಲೂ ಈ ಬಾರೀಕೆ ಅನ್ನುವುದು ಇತ್ತು.ಈ ಬಾರೀಕೆಗಳು ಹೆಚ್ಚಿನ ದೈವಗಳ ಕಥೆಯಲ್ಲಿ ಬರುತ್ತದೆ. ಬಾಳಿಕೊಂಡು ಯಾ ಬಾಳ್ವಿಕೆ ಮಾಡಿಕೊಂಡು ಬಂದ ಮನೆ ಎಂದು ಇದರ ಅರ್ಥ. ಅದರಲ್ಲೂ ಬಿಲ್ಲವರದ್ದು ಬಾರೀಕೆ ಮತ್ತು ದೋಲಾ ಬಾರಿಕೆ ಎಂದು ಜಾನಪದ ಮತ್ತು ದೈವಗಳ ಬಾಯಿಯಿಂದ ಬರುವ ಉಲ್ಲೇಖ. ಹಾಗೆಂದು ಮಾತ್ರಕ್ಕೆ ಬಿಲ್ಲವರಿಗೆ ಗುತ್ತು ಇಲ್ವ ಎನ್ನುವ ಪ್ರಶ್ನೆ ಕೆಲವರು ಕೇಳಬಹುದು.ಗುತ್ತುಗಳು ಇವೆ,ಬೂಡುಗಳು,ಕಟ್ಟೆಮನೆಗಳು ಸ್ವಾಧಿನದಲ್ಲಿವೆ. ಈ ದೋಲಾ ಎಂದರೆ ಏನು ಎಂಬ ಪದಕ್ಕೆ ತುಳುವಿನಲ್ಲಿ ನಿಖರವಾದ ಅರ್ಥವಿಲ್ಲದಿದ್ದರೂ ಅತೀ ಹೆಚ್ಚು ಸಾಗುವಳಿ ಜಾಗ ಇರುವ,ಮೂರ್ತೆ ಆಳು ಕಾಳುಗಳು ಇರುವ ಶ್ರೀಮಂತ ಮನೆತನ ಎಂಬ ಮಾತಿದೆ. ಉಳಿದಂತೆ ಬೇರೆ ದೃಷ್ಟಿಯಿಂದ ನೋಡುವುದಾದರೆ ದಾ.ರಾ.ಬೇಂದ್ರೆಯವರ ’ಗಂಗಾವತರಣ’ ಕವನಸಂಕಲನದ ಏಲಾಗೀತ ಕವನದಲ್ಲಿ ದೋಲಾ ಎಂದರೆ ಉಯ್ಯಾಲೆ ಎಂಬ ಅರ್ಥ ಇ‍ದೆ.ಹಾಗೆಯೇ ಅಮರಸಿಂಹನ ನಾಮಲಿಂಗಾನುಶಾಸನ ಅಥವಾ ಅಮರಕೋಶ ಕಾವ್ಯ ಮಾಲೆಯಲ್ಲೂ ದೋಲಾ ಎಂದರೆ ತೂಗುವ ಮಂಚ,ಉಯ್ಯಾಲೆ ಎಂಬ ಅರ್ಥ ಕೊಟ್ಟಿದ್ದಾರೆ.ಇನ್ನು ಉಳಿದಂತೆ ದೋಲಾ ಎಂಬ ಪದ ಎಲ್ಲೂ ಕಾಣ ಸಿಗುವುದು ಭಾರಿ ವಿರಳ.

ಬಾರೀಕೆ ಅಥವಾ ಇನ್ನಿತ್ತರ ದೋಲಾ ಬಾರೀಕೆಗಳು ಇರುವ ಬೈದ್ಯ ಜನಾಂಗ ಅಪ್ಪೆಕಟ್ಟು ಎಂಬ ಕಟ್ಲೆಯಲ್ಲಿ,ಅನಂತರದ ಆಳಿಯ ಕಟ್ಟು ಎಂಬ ಕಟ್ಲೆಯನ್ನು ಅನುಸರಿಸುತ್ತಾ, ಇಲ್ಲಿ ಒಬ್ಬ ಮುಖ್ಯ ಯಜಮಾನ ಮತ್ತು ಅವನ ತಾಯಿ ಕೂಡು ಕುಟುಂಬದ ಮಾತೆಯಾಗಿ ಮುಖ್ಯವಾಗಿ ಕಾಣುತ್ತಾರೆ.ಉಳಿದಂತೆ ಅರುವತ್ತು ಎಪ್ಪತ್ತು ಸದಸ್ಯರಲ್ಲಿ ಎಲ್ಲಾರೂ ತಮ್ಮ ವೃತ್ತಿ ದುಡಿಮೆ,ಬೇಸಾಯ ಸಾಗುವಳಿ ಮಾಡುವ ಸಂಪ್ರದಾಯ.ಹಿರಿಯ ಯಜಮಾನ ದೈವಗಳ ಚಾಕ್ರಿ ಮಾಡುತ್ತ,ಉಳಿದವರಿಗೆ ಕೆಲಸಗಳ ಸೂಚನೆಗಳನ್ನು ನೀಡುವ ಕಾಯಕ. ಒಬ್ಬರು ನಾಟಿ ಬೈದ್ಯನಾದರೆ,ಇನ್ನೊಬ್ಬರು ಮಂತ್ರವಾದಿ ಈ ರೀತಿ ಇರುತ್ತಿದ್ರು. ಅನಾದಿಕಾಲದಿಂದಲೂ ಬೂತಾರಾಧನೆಯನ್ನು ನಂಬಿಕೊಂಡು ಬಂದು ಆದಿಮ ಸಂಸ್ಕೃತಿಯಲ್ಲಿ ಆರಾಧಿಸುಕೊಂಡು ಬಂದ ಬೈದ್ಯರು,ನಂತರದಲ್ಲಿ ಅದನ್ನೆ ಕಾಲಕ್ಕೆ ತಕ್ಕಂತೆ ಕೋಲ ಎಂಬ ಮಾತಿನಂತೆ ಹೋಮ,ನೇಮ, ನಿಯಮಗಳ ಪ್ರಕಾರದಲ್ಲಿ ಬದಲಾವಣೆ ಬಯಸುತ್ತ ಅದರಲ್ಲೆ ದೈವರಾಧನೆಯನ್ನು ಮಾಡುತ್ತಾ ಬಂದರು.ಇದಕ್ಕೆ ಪೂರಕವಾಗಿ ಕೋಟಿ ಚೆನ್ನಯ್ಯ ಬೈದೆರುಗಳ ಪಾರ್ಧನದಲ್ಲಿ ಅಮಂಧ ಅದೆ,ಹೋಮಂದ ಸಾಲೆ,ಸಂಕಮಲೆ ರಾವು,ಬೀದಿಪಡೆ ಕೋಟೆಯ ಏರಾಜೆ ಬರ್ಕೆ ಎಂಬ ಉಲ್ಲೇಖ ಬರುತ್ತದೆ. ಇನ್ನು ಜುಮಾದಿಕಥೆಯಲ್ಲೂ ಸಿದ್ದಮರ್ದ ಬೈದ್ಯರ ಹೋಮದ ಸಾಲೆಯ ಉಲ್ಲೇಖ ಇದೆ.ಹೀಗೆ ಬೈದ್ಯರು ದೀಕ್ಷೆ ಪಡೆದು ಸಿದ್ದಿ,ಜಪ,ತಪ, ಶುರುವಾಯಿತು. ಬೈದ್ಯರು ತನ್ನ ಬೈದ್ಯ ವೃತ್ತಿಗೆ ಬೇಕಾದ ಅರಿವಳಿಕೆಯ ಅಮಲು ಮತ್ತು ಕ್ಯಾಲ್ಸಿಯಂ ಅಂಶಗಳ ಮದ್ದು ತಯಾರಿಸಲು ಅವರು ಅರಿಸಿಕೊಂಡ ಪಾನೀಯ ಅಂದ್ರೆ ಅದು ತಾಳೆ,ತೆಂಗು,ಬೈನೆ,ಈಚಲು ಮರದ ನೀರ ಅರ್ಥಾತ್ ಸೆಂದಿ.ತುಳುವಿನ ಕಲಿ.ಇದನ್ನು ದೈವ ಭಾಷೆಯಲ್ಲಿ ಅಮೃತ ಎಂದು ಕರೆಯುತ್ತಾರೆ.ಅಂತಹ ವಿಶೇಷವಾದ ಗುಣ ಈ ಸೇಂದಿಗಿದೆ.ಮತ್ತು ಇದರಿಂದ ವೊಲೆ ಬೆಲ್ಲ ಎಂಬ ಬೆಲ್ಲವನ್ನು ತಯಾರಿಸುತ್ತಾರೆ. ಇದು ಭಾರಿ ಔಷಧೀಯ ಗುಣಗಳನ್ನು ಹೊಂದಿರುವ ಬೆಲ್ಲ.

ಮ್ಮ ಈ ಪವಿತ್ರವಾದ ತುಳುನಾಡಿನಲ್ಲಿ ಅನಾದಿಯ ಬೂತಗಳು,ದೈವಗಳು ಬಿಲ್ಲವರನ್ನು ಬೈದ್ಯ,ಬೊಂಟ್ರ,ಬಿರುವಮಗೆ ಎಂಬ ನಾಮದೊಂದಿಗೆ ಲೆಪ್ಪು ಕರೆಯುತ್ತವೆ. ತುಳುನಾಡಿನ ಆದಿಮ ಸ್ವರೂಪದ ಬೂತರಾಧನೆಗೆ ಅಂದರೆ ಮರದಡಿ ಕಲ್ಲು ಹಾಕಿ ನೀರು,ಹೂವು,ದೀಪ,ದೂಪ,ಅಗೇಲು,ಪರ್ವ ಕೊಡುವ ಕ್ರಮಕ್ಕೆ ಬಿಲ್ಲವ ಸಮಾಜದ ಕೊಡುಗೆ ಅನನ್ಯವಾಗಿದೆ.ನಂತರದಲ್ಲಿ ಗ್ರಾಮದ ಇಂತಿಷ್ಟು ಸಮುದಾಯಗಳು ಒಟ್ಟುಗೂಡಿ ಸೇರಿ ನಿಯಮವಾಗಿ ಕಟ್ಟು ಕಟ್ಲೆಯಲ್ಲಿ ಮಾಡುವ ಅರಸು ದೈವರಾಧನೆ,ರಾಜ್ಯದ ಕಲದ ರಾಜ್ಯನ್ ದೈವಗಳ ನೇಮ ನಡೆಯುವಾಗ,ಗ್ರಾಮದ ಗ್ರಾಮದೈವಗಳ ದೊಂಪದಬಲಿ ನೇಮ ನಡೆದಾಗ ಬಿಲ್ಲವರು ಯಾ ಬೈದ್ಯರು ಪ್ರದೇಶವಾರು ಬಿನ್ನತೆಯಲ್ಲಿ ಅಗಿ ಅಲ್ಲಿನ ಕೆಲವೊಂದು ಚಾಕ್ರಿಗಳನ್ನು ಮಾಡಿದರು.ಅದ್ರಲ್ಲಿ ಬೊಂಟ್ರತನದ ಮುಂದಾಳತ್ವ,ಅಂಕದ ಕಲಕ್ಕೆ ಕೋಳಿ ಗೂಟ ಹಾಕುವ ಚಾಕ್ರಿ,ದರಿ ಹಾಕುವ ಚಾಕ್ರಿ,ಮಡಲು ತೂಟೆ ದೈವಕ್ಕೆ ಕೊಡುವ ಕೆಲಸ,ದೈವಕ್ಕೆ ಅಮೃತ(ಸೇಂದಿ) ಕೊಡುವ ಚಾಕ್ರಿಗೆ,ತನ್ನ ಮನೆಯಿಂದ ದೈವಕ್ಕೆ ಸೀರಿ ಮಡಲು ತರುವ ಚಾಕ್ರಿ,ಹಂದಿ,ಕೋಳಿ ದೈವಕ್ಕೆ ಬಲಿ ಕೊಯ್ಯುವ ಚಾಕ್ರಿ,ಇನ್ನು ಕೆಲವೆಡೆ ಮುಖ್ಯ ದೈವಕ್ಕೆ ಇಲ್ಲವೇ ಪರಿವಾರ ದೈವಗಳಿಗೆ ಚಾಕ್ರಿಮಾನ್ಯರಾಗಿ,ಪೂಕರೆ ಗದ್ದೆಗೆ ಪೂಕರೆ ನೆಡುವವರಾಗಿ ದೈವಸಾನಕ್ಕೆ ಮಕರ ತೋರಣ ಇಡುವವರಾಗಿ,ಚಪ್ಪರದ ವ್ಯವಸ್ಥೆ ಮಾಡುವವರಾಗಿ,ಕೆಲವೆಡೆ ದೈವದ ಬಂಡಿ ಎಳೆಯುವವರಾಗಿ,ದೈವದ ಬಂಡಿ ಅಲಂಕರಿಸುವವರಾಗಿ ದೈವಗಳ ಭಂಡಾರ ಬರುವಾಗ ತೂಟೆ ಹಿಡಿದು ಬೆಳಕು ಹರಿಸಿದವರಾಗಿ,ದೈವಗಳಿಗೆ ಲೋವೆ ಕಂಬ ಹಾಕುವವರಾಗಿ,ನೇಮಕಗೊಳ್ಳುತ್ತಾರೆ. ಇದು ಹೆಚ್ಚಿನ ಭಾಗಗಳಲ್ಲಿ ಈಗಲೂ ಚಾಲ್ತಿಯಲ್ಲಿವೆ. ಬೈದ್ಯತನ ಎಂಬುದು ಬಿಲ್ಲವರಿಗೆ ಅನಾದಿಕಾಲದಿಂದಲೂ ಕೈಹಿಡಿದುಕೊಂಡು ಬಂದ ಒಂದು ವೃತ್ತಿ.ಕಾಡಿನ ಮರಗಳ,ಗಿಡಗಳ,ಬಳ್ಳಿಗಳ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಿದ್ದ ಬಿಲ್ಲವರು ಬೈದ್ಯ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದರು.ಇಲ್ಲಿ ಬೈದ್ಯ ಎಂಬುವುದಕ್ಕೆ ಗಂಡು ಹೆಣ್ಣೆಂಬ ಭೇದ ಭಾವ ಇರಲಿಲ್ಲ.ಅ ಕೂಡು ಕುಟುಂಬದ ಭಾರೀಕೆಯ ಮನೆಯಲ್ಲಿ ಯಾರು ಬೇಕಾದರೂ ಮಂತ್ರ,ತಂತ್ರ,ಬೈದ್ಯ,ಮದ್ದು,ಪಂಡಿತ ಕಳಿಯಬಹುದು. ಅದರ ಜತೆಗೆ ಅವರಿಗೆ ನಿತ್ಯ ಉಪಯೋಗಕ್ಕೆ ಬೇಕಾದ ಮುಂಡೊವು ವೊಲಿಯ ಚಾಪೆ ನೆಯ್ಯುವುದು,ಕಡುಪು,ಕುರ್ವೆ,ಬಿಳಲು ಬುಟ್ಟಿ ಹೆಣೆಯುವುದು ಇತ್ಯಾದಿ ಮಾಡುತ್ತಿದ್ದರು. ಅಜ್ಜಿ ಯಾ ಅಜ್ಜ ಅದವರು ತನ್ನ ಮೊಮ್ಮಗ, ಮೊಮ್ಮಗಳಿಗೆ, ಮಾವ ಅದವನು ತನ್ನ ಸೋದರಳಿಯ ಮಾತ್ರವಲ್ಲದೇ ತನ್ನ ಸೋದರ ಸೊಸೆಗೆ ಕೂಡ ತನ್ನ ಬೈದ್ಯ ವಿದ್ಯೆಯನ್ನು ದಾರೆ ಎರೆಯುತ್ತಿದ್ದರು.ಇದರ ಜೊತೆಗೆ ಬೂತಾರಾದನೆಯ ಮತ್ತು ದೈವರಾದನೆಯ ಕಥೆ ಸಮೇತವಾಗಿ ಸಂಪೂರ್ಣ ವಿಚಾರಗಳನ್ನು ಕಳಿಸಿಕೊಡುತ್ತಿದ್ದರು. ಈ ರೀತಿಯಲ್ಲಿ ಪರಂಪರಗತವಾಗಿ ಈ ಬೈದ್ಯ ವೃತ್ತಿ ಜೊತೆಗೆ ದೈವಗಳ ಆರಾಧನೆಯೂ ಮುಂದುವರೆಯುತ್ತಾ ಬಂತು‌.ಇಂದಿಗೂ ತುಳುನಾಡಿನ ಅಲ್ಲಿ ಇಲ್ಲಿ ಸ್ವಲ್ಪಮಟ್ಟಿಗೆ ಬಿಲ್ಲವ ಬೈದ್ಯರು,ಪಂಡಿತರು ದೈವಗಳ ಹೆಸರಲ್ಲಿ ಮದ್ದು ನೀಡುವವರು ಕಾಣಸಿಗುತ್ತಾರೆ. ಅನಾದಿಕಾಲದಲ್ಲಿ ಬೈದ್ಯರ ಈ ಬೈದ್ಯತನ ಎಲ್ಲಿಯವರೆಗೆ ಪ್ರಸಿದ್ಧಿ ಇತ್ತು ಅಂದ್ರೆ ಕೆಲವೊಮ್ಮೆ ದೈವಕ್ಕೂ ಬೈದ್ಯನು ತನ್ನ ಬೈದ್ಯ (ಮದ್ದು) ಬೆಂದಿದ್ದಾನೆ ಎಂಬ ಉದಾಹರಣೆಗೆ,ಇದೊಂದು ಸಣ್ಣ ಉಲ್ಲೇಖವನ್ನು ನೀಡುತ್ತೆನೆ.ಸುಳ್ಳಮಲೆಯ ಅರದ್ದೆರ ಪಂಜುರ್ಲಿ ಬಂಡಾಡಿ ಅರು ಮಾಗಣೆಗೆ ಬಂದಾಗ ಅಡೆಕ್ಕಲು ಹತ್ತಿರದ ಉದ್ದೆಜಾಲು ಬೊಂಟ್ರಪಾಲು ಧರ್ಮಚಾವಡಿಗೆ ದೈವ ಪ್ರಸರಣೆಯಲ್ಲಿ ಬರುವಾಗ ಬೆನ್ನೆಂತಿಮಾರು ಗದ್ದೆಯಲ್ಲಿ ಕಾವೇರ ಸಂಕ್ರಮಣಕ್ಕೆ ಗದ್ದೆಗೆ ಇಟ್ಟ ಕಾಸರ್ಕನ ಕೋಲಿನ ಮುಳ್ಳು ದೈವದ ಕಾಲಿಗೆ ಚುಚ್ಚಿ,ಭಯಾನಕ ನಂಜು ವೇದನೆಯಿದ ಬೊಬ್ಬೆರಿಯುತ್ತ ವೊ..ಮುದರಬೈದ್ಯ ಮರ್ದು ಕೊಂಡ ಎಂದು ಕೂಗುತ್ತ ಆಳುತ್ತ ಹೇಳಿತು.ಅವಾಗ ಬೊಂಟ್ರಪಾಲಿನ ಮುದರ ಬೈದ್ಯ ಅದಕ್ಕೆ ಮದ್ದು ಮಾಡಿದರು.ಅದರ ಅಣಕನ್ನು ಈಗಲೂ ಉದ್ದೆಜಾಲಿನ ಗ್ರಾಮ ನೇಮದಲ್ಲಿ ಮಾಡಿ ತೋರಿಸುತ್ತಾರೆ.ಈ ರೀತಿಯಲ್ಲಿ ದೈವ ಬೊಂಟಪಾಲಿನ ಧರ್ಮಚಾವಡಿಗೆ ನುಗ್ಗಿ ವೊರ್ಕರಗುಂಡಿಯ ಪಾದೆಯಲ್ಲಿ ನೆಲೆಯಾಯಿತು.ಇನ್ನು ಅನಾದಿಕಾಲದಿಂದಲೂ ದೈವಗಳ ಕಥೆಗೂ ಅದರಲ್ಲಿ ಬರುವ ಬೈದ್ಯನಿಗೂ ಇರುವ ನಂಟನ್ನು ನೋಡುತ್ತಾ ಹೋದರೆ,

೧.ಶಿರಾಡಿ ದೈವ ಎಂಬುವುದು ಮೂಡಾಣ ತುಳುನಾಡಿನ ರಾಜನ್ ದೈವ.ಗ್ರಾಮ ಇಳಿದು ನೇಮ ಅಗುವ ಈ ದೈವದ ಕಥೆಯಲ್ಲೂ ಒಬ್ಬ ಬೈದ್ಯ ಮಾಡುವ ಬೊಂಟ್ರ ಬೈದ್ಯನ ಉಲ್ಲೇಖವೂ ಇದೆ.
ಮಾನಾಯಿಮಾರು ಬಲ್ಲಾಳರ ಆದೇಶದಂತೆ
ಇಪ್ಪುಲಿ ಮುದ್ದನನ್ನು ರೆಖ್ಯಾದ ಬಲ್ಲಾಳರ ಒಕ್ಕಲಿನಲ್ಲಿ ಇದ್ದ ಜನರು ಚಿತ್ರಹಿಂಸೆ ನೀಡಿ ಕೊಂದ ಸಮಯದಲ್ಲಿ,ಅವಾಗ ಸತ್ಯ,ಸುಳ್ಳು, ನ್ಯಾಯ,ಅನ್ಯಾಯ,ಧರ್ಮ ಅಧರ್ಮ ಯಾವುದೆಂದು ಸರಿಯಾಗಿ ವಿಮರ್ಶಿಸದೇ
ಮಾನಾಯಿಮಾರು ಬಲ್ಲಾಳರು ಆದೇಶಿದಕ್ಕಾಗಿ ಅವರ ಮೇಲೆ ಕೋಪಗೊಂಡ ದೈವವು ಬಲ್ಲಾಳರಿಗೆ ಮಾಯದ ಕೊಲ್ಪು ಹಾಕಿ,ಹಾಗೆಯೇ ಅವರ ತಂಗಿ ಯೆಣೆತ್ತಿಮಾರಿನ ಬೀರಕ್ಕೆ ಪೊಂಜೊವುಗೆ ಮಾದೆರಕುತ್ತ ಎಂಬ ಕಾಯಿಲೆಯನ್ನು ದೈವ ಹಾಕುತ್ತದೆ.ಅವಾಗ ಇಂತಹ ಕಾಯಿಲೆಯನ್ನು ವಾಸಿ ಮಾಡಲು ನಮ್ಮ ರಾಜ್ಯದಲ್ಲಿ ಯಾರು ಇದ್ದಾರೆ ಎಂದಾಗ, ಅವರ ಆಡಳಿತ ವ್ಯಾಪ್ತಿಯ ತಿರ್ತೊಡಿ ದೋಲಾ,ಮಿತ್ತೊಡಿ ದೋಲಾ ಎಂಬ ದೋಲಾ ಬಾರೀಕೆಯಲ್ಲಿ ಬೊಂಟ್ರ ಬಿರ್ಮಣ ಬೈದ್ಯ ಎಂಬವರು ಇರುತ್ತಾರೆ.ಅವರಿಗೆ ಜನಮಾನಿ ಕಳಿಸಿ.ಅವರನ್ನು ಕರೆಸುತ್ತಾರೆ.ಆದರೆ ಅವರು ಇಂದು ಬೇಡ, ನಾಳೆಯ ದಿನ ಮದ್ದು ಕೊಡಲು ನಾನು ಬರುತ್ತೆನೆ,ಬೆಳಿಗ್ಯೆ ಬಲ್ಲಾಳರು ಹಾಲು ಕುಡಿಯಬೇಡಿ, ಬೀರಕ್ಕೆ ಪೊಂಜೊವು ತಂಗಳನ್ನ ಉನ್ನೊದು ಬೇಡ ಎಂದು ಹೇಳಿ ಹೋಗುತ್ತಾರೆ.ಮರುದಿನ ಬೆಳಿಗ್ಯೆ ಎದ್ದು ಕಾಡಬದಿಯಲ್ಲಿ ಮದ್ದಿನ ಗಿಡದ ಅಡಿಯ ಬೇರು,ಮದ್ದಿನ ಗಿಡದ ಮೇಲಿನ ಚಿಗುರೆಲೆ ಚೀವುಟಿ ತರುತ್ತಾರೆ.ತೊಡ ಬಳಿಗೆ ಹೋಗಿ ಕನ್ನಡಿ ಹಾವು ಗಿಡ ಎಂಬ ವಿಷದ ಗೆಡ್ಡೆಯನ್ನು ತಂದು ಅರೆದು ಬಲ್ಲಾಳರ ಹಾಲಿನಲ್ಲಿ ಮತ್ತು ಬೀರಕ್ಕೆ ಹೆಂಗಸಿನ ತಂಗಳನ್ನಕ್ಕೆ ಹಾಕಿ ಕೊಟ್ಟು ಅವರನ್ನು ಕೊಂದರು ಎಂಬ ಕಥೆ ಇದೆ.ಅದಕ್ಕೆ ಪ್ರತಿಯಾಗಿ ದೈವ ಅವರನ್ನು ಜಯಿಸಿತು(ಅಂದರೆ ಕೊಂದಿತು) ಎಂಬ ಉಲ್ಲೇಖ ಬರುತ್ತದೆ. ಇಲ್ಲಿ ನಾವು ಯಾವುದೇ ರೀತಿಯ ಸತ್ಯ ಮಿಥ್ಯದ ಪರಮರ್ಶೆ ಮಾಡುವುದಕ್ಕಿಂತ ದೈವದ ಸಂಧಿಯ ಉಲ್ಲೇಖವನ್ನು ಮಾತ್ರ ತಿಳಿದುಕೊಂಡರೆ ಉತ್ತಮ.

೨.ಸತ್ಯದ ಮಗಳು ದೇಯಿಯ ಮಕ್ಕಳು ಅವಳಿ ವೀರರು ಕೋಟಿ ಚೆನ್ನಯ್ಯರು.
ಕಾಡಿನಲ್ಲಿ ಸಿಕ್ಕಿದ ಸತ್ಯದ ಮಗಳು ಸ್ವರ್ಣ ಕೇದಗೆಯನ್ನು ತನ್ನ ಏರಾಜೆ ಬರ್ಕೆಗೆ ತಂದು,ತನ್ನ ಜಾತಿಯ ಕುಲಕಂಠ ಹಿಡಿದು,ಅವಳಿಗೆ ದೇಯಿ ಬೈದ್ಯೆತಿ ಎಂಬ ಹೆಸರಿಟ್ಟು ತನ್ನ ಎಲ್ಲಾ ಬೈದ್ಯ ವಿದ್ಯೆಯನ್ನು ಅವಳಿಗೆ ಕಳಿಸಿಕೊಟ್ಟು ಕರ್ಗಲ್ಲ ತೋಟದ ಕಾಂತಣ್ಣ ಬೈದ್ಯೆರಿಗೆ ಮದುವೆ ಮಾಡಿಕೊಟ್ಟರು ಸಾಯನ ಬೈದ್ಯರು.ಈ ದೇಯಿ ಬೈದೆತಿಯು ಬಲ್ಲಾಳರಿಗೆ ಮದ್ದು ನೀಡಿ ಹೆಸರುವಾಸಿಯಾದವರು.
ಅವರಿಗೆ ಹುಟ್ಟಿದ ಇಬ್ಬರು ಅವಳಿ ಕಾರ್ನಿಕದ ಪುರುಷರು ಬೈದ್ಯೆರ್ಲು ಎಂದು ಕರೆಯುವ ಕೋಟಿ ಚೆನ್ನಯರು ಸತ್ಯ,ಧರ್ಮ,ನ್ಯಾಯಕ್ಕೆ ಹೆಸರುವಾಸಿಯಾಗಿ ಇಂದು ತುಳುನಾಡಿನ ಎಲ್ಲೆಡೆಯೂ ಗರಡಿಗಳಲ್ಲಿ ಅರಾಧನೆ ಪಡೆಯುತ್ತಿದ್ದಾರೆ.ಇವರನ್ನು ಕೋಟಿ ಚೆನ್ನಯರು ಎನ್ನುವುದಕ್ಕಿಂತ ಎಣ್ಮೂರ ಬೈದೆರ್ಲು ಎಂದೇ ಹೆಚ್ಚು ಉಲ್ಲೇಖ ಮಾಡುತ್ತಾರೆ.

೩.ಕುಪ್ಪೆ ಬೈದ್ಯರುಗಳ ಕಟ್ಟಲ್ಲಿ ನೇಮ ಪಡೆದ ಪಂಜುರ್ಲಿ. ಪಂಜುರ್ಲಿ ದೈವವನ್ನು ಬಿರ್ಮಣ ಬಲ್ಲಾಳರ ಕಾಲದಲ್ಲಿ ಬಾಲೋಲಿಗಳ ಮಂತ್ರತಂತ್ರದ ಸಹಾಯದಿಂದ ಬಂಧನ ಮಾಡಿ ನೀರಿಗೆ ಹಾಕಿದಾಗ,ಇನ್ನೂ ಈ ದೈವ ಬೊಲ್ಯಾಲ ಗುಂಡಿಯ ನೀರಿನಿಂದ ಯಾವಾಗ ಮೇಲೆದ್ದು ಬರುತ್ತದೆ ಎಂದು ಕೇಳಿದಾಗ,ಬಾಲೋಲಿಗಳು ಕುಪ್ಪೆರುಗಳ ಕಾಲದಲ್ಲಿ ಮೂರ್ತೆಯ ಸಮಯದಲ್ಲಿ ಬೊಲ್ಯಾಲಗುಂಡಿಗೆ ಬೈನೆಮರದ ಕೊಂಬಿನ ಕಂಬುಲು ಬಿದ್ದಾಗ,ಅವರಿಗೆ ನೀರಲ್ಲಿ ಕೀಜನ ಮೀನಿನ ಗುಂಪಲ್ಲಿ‌ ಒಂದು ದೊಡ್ಡ ಮೀನಿನ ರೂಪದಲ್ಲಿ ಕಾಣಸಿಕ್ಕಿ ಅನಂತರ ಅವರಿಂದ ಆರಾಧನೆ ಪಡೆಯುತ್ತದೆ ಎಂದು ಹೇಳಿದ ಪ್ರಕಾರ ಕೋಟಿ ಕುಪ್ಪೆ,ಚೆನ್ನಯ ಕುಪ್ಪೆರುಗಳ ಕಾಲದಲ್ಲಿ ಮೂರ್ತೆಗೆ ಹೋದಾಗ, ಮೀನಿನ ರೂಪದಲ್ಲಿ ಬೊಲ್ಯಾಲಗುಂಡಿಯಲ್ಲಿ ಸಿಕ್ಕಿ ಅದನ್ನು ದಾಯ ಮಾಡಿ‌ ಪದಾರ್ಥ ಮಾಡಿದಾಗ, ಅ ಪದಾರ್ಥ ಬೆಯ್ಯುವ ಮಣ್ಣಿನ ಪಾತ್ರೆಯಲ್ಲಿ ರಕ್ತ ತೋರಿಸಿ,ತನ್ನ ಕಾರ್ನಿಕ ತೋರಿ, ಮುಂದೆ ಏಳು ದೋಲಾ, ಹದಿನಾರು ಬಾರೀಕೆಯವರು ಒತ್ತಿಕಟ್ಟಿ ಪಾರಿ ಹೇಳಿದ ಮುಖಾಂತರವಾಗಿ ಕುಪ್ಪೆ ಪಂಜುರ್ಲಿ ಕುಪ್ಪೆರ್ಲೆ ಪಂಜುರ್ಲಿ ಎಂದು ತುಳುನಾಡಿನಾದ್ಯಂತ ಆರಾಧನೆ ಪಡೆಯುತ್ತದೆ.

೪.ಉದ್ರಾಂಡಿ ದೈವಕ್ಕೆ ಅಗ ಭೋಗ ಕೊಟ್ಟ ಕೊಂಬಾರ ಭಾರಿಕೆಯ ಕುಜುಂಬ ಬೈದ್ಯರು.(ಇಂದು ಈ ಭಾರಿಕೆ ಎಲ್ಲಿದೆಯೋ ಗೊತ್ತಿಲ್ಲ) ಉದ್ರಾಂಡಿ ದೈವದ ನುಡಿಯಲ್ಲೆ ಗೌಡ ಜನಾಂಗದಲ್ಲಿ ಬರುವ ಪೆರ್ಬನ್ನ ಬರಿತ್ತ ಜನಾನಂದ ದೈವ,ಬಂಗೇರ ಬರಿತ್ತ ಪಾರಿ ಪಲಯದ ದೈವ ಎಂಬ ಉಲ್ಲೇಖ ಇದೆ. ಆದರೂ ಈ ದೈವ ತನ್ನ ತುಲುನಾಡಿನದ್ಯಂತ ಪ್ರಸರಣಗೊಳ್ಳುವಾಗ ಒಬ್ಬ ಬೈದ್ಯರಾದ ಕೊಂಬಾರ ಬಾರೀಕೆಯಲ್ಲಿ ವೊರಿಸಾರ ಕುಜುಂಬ ಬೈದ್ಯರು ಅ ದೈವಕ್ಕೆ ಕೆಂಪಿ ಮುದ್ರೆ ಒತ್ತಿ,ಎರಡು ಕೈಗೆ ಕಂಚಿ ಸೂಟೆ ನೀಡಿ ಬಲಿ,
ಅಗ ಭೋಗ ಕೊಟ್ಟರು ಎಂದು ಉಲ್ಲೇಖ ಇದೆ.

೫.ಹಾವಿನ ರೂಪದಲ್ಲಿ ಘಟ್ಟದಿಂದ ಇಳಿದು ಬಂದ ದೈವ ಜಠಾಧಾರಿ. ಪಿಲವೂರು ಕೊಟ್ಯದ ಜಾಯಿಲಪ್ಪೆ ಬೈದೆತಿಯ ಬೆನ್ನತಿ ಘಟ್ಟದ ಮೇಲಿನಿಂದ ಇಳಿದು ಬಂದ ಜಠಾದಾರಿ ದೈವವೂ ಪಿಲವೂರ ಕೊಟ್ಯ ತನ್ನ ಮೂಲಸ್ಥಳವೆಂದು ಹೇಳುತ್ತದೆ.

೬.ಬಲ್ನಾಡಿನ ದೈವಗಳ ಭಂಡಾರ ಹೊರಡುವಿಕೆಯಲ್ಲಿ ಸೂಟೆ ಹಿಡಿದುಕೊಂಡು ಭಂಡಾರದೊಂದಿಗೆ ಹೋಗುವ ಬೈದ್ಯರು. ಬಲ್ನಾಡಿನ ಜಾತ್ರೆಗೆ ಅಂದಿನ ಕಾಲದಲ್ಲಿ ದೈವದ ಕಾರ್ಯಕ್ಕೆ ಮಂದ ಬೆಳಕಿನ ವ್ಯವಸ್ಥೆಯನ್ನು ಯಾರು ಮಾಡುವುದು ಎಂದು ಬಲ್ಲಾಳರು ಕೇಳಿ ನಿರ್ಧರಿಸಿ, ಚಿಪ್ಪಾರಿನ ಒಂದು ಬಿಲ್ಲವ ಕುಟುಂಬ ವರ್ಗವನ್ನು ನಿರ್ಣಯಿಸಿ ಅವರನ್ನು ಬಲ್ನಾಡಿಗೆ ತರಿಸಿ, ಅವರು ದೈವದ ಭಂಡಾರ ಹೋಗುವ ಹೊತ್ತಲ್ಲಿ,ವಲಸರಿಯ ಸಮಯದಲ್ಲಿ ಮಡಲು ತೂಟೆ ಹಿಡಿದು ದೈವಕ್ಕೆ ಸೇವೆ ಸಲ್ಲಿಸಿದರು ಎಂದು ಪ್ರತೀತಿ ಇದೆ.ಅಂದಿನಿಂದ ಇಂದಿನವರೆಗೆ ಬಲ್ನಾಡಿನ ದಂಡನಾಯಕ ಮತ್ತು ಉಲ್ಲಾಲ್ದಿ ಅಮ್ಮನ ಪುತ್ತೂರು ಮಹಾಲಿಂಗೇಶ್ವರ ದೇವರ ಬೇಟಿಗೆ ಬರುವಾಗ ಅ ಊರಿನ ಎಲ್ಲಾ ಬಿಲ್ಲವರು ಒಗ್ಗಟ್ಟಿನಿಂದ ನೂರು ಇನ್ನೂರು ಜನ ಉರಿಸಿದ ಮಡಲಿನ ತೂಟೆ ಹಿಡಿದುಕೊಂಡು ಮುಂದೆ ಬರುತ್ತಾರೆ. ಹಾಗೆಯೇ ಪುತ್ತೂರಿನ ರಥ ಉತ್ಸವ ಆಗುವಾಗ ಅದರ ಎದುರು ಹೋಗುವ ಕಾಜುಕುಜುಂಬ ಎಂಬ ದೈವದ ಭಂಡಾರವೂ ಬಪ್ಪಳಿಗೆಯ ಒಂದು ಬಿಲ್ಲವ ಮನೆಯಿಂದ ಬರುವುದು.

೭.ಬೆರ್ಮಣ ಬೈದ್ಯರ ಕೈಹಿಡಿದ ಕುಂಟಾಡಿ ಲೆಕ್ಕೆಸಿರಿ ದೈವ. ಕಾರ್ಕಳ ದುರ್ಗಾದ(ತೆಳ್ಳಾರು) ತುಂಬೆದಿಲ್ಲ ಮನೆಯಿಂದ ಮುನಿಸಿನಿಂದ ಹೊರಟುಬಂದ ಲೆಕ್ಕೆಸಿರಿ ದೈವವು ಕಲ್ಯಾಗ್ರಾಮದ ಕುಂಟಾಡಿಯ ಕುಲದ ಮನೆಗೆ ಬಂದು ಅಲ್ಲಿಂದ ಮುಂದಕ್ಕೆ ಕಾರ್ಕಳ ಬೈರವರಸರ ದಳವಾಯಿ ಬೆರ್ಮನ ಬೈದ್ಯರ ಕಾಲದಲ್ಲಿ ಬೆರ್ಮನೊಟ್ಟು ಬಾರೀಕೆಗೆ ರಾಜು ಮುಗ್ಗೇರನ ರೂಪದಲ್ಲಿ ಬಂದು,ಅವರಿಗೆ ಎಲ್ಲಾ ಕಾರ್ಯಗಳಲ್ಲಿ ಬೆನ್ನೆಲುಬು ಆಗಿ ನಿಂತು,ಕೈಯಲ್ಲಿ ಹೇಳಿದ ಕೆಲಸವನ್ನು ತಲೆಯಲ್ಲಿ ಹೊತ್ತು ಮಾಡಿ,ಬೆರ್ಮಣ ಬೈದ್ಯರ ್ರತಿ ಕೆಲಸ, ಕಾರ್ಯದಲ್ಲೂ ಜಯಶಾಲಿಯಾಗಿಸಿ,ನಂತರ ನಾನು ಮನುಷ್ಯನಲ್ಲ,ಮಾಯಾ ರೂಪದ ಕಾರ್ನಿಕ ಸತ್ಯ ದೈವ ಲೆಕ್ಕೆಸಿರಿ ಎಂದು ಕನಸಿನಲ್ಲಿ ವಿಚಾರ ತಿಳಿಸಿ ಅದೃಶ್ಯವಾಗಿ ಬೆರ್ಮನೊಟ್ಟಲ್ಲಿ ಲೆಕ್ಕೆಸಿರಿ ಆರಾಧನೆ ಪಡೆಯಿತು, ಮುಂದಕ್ಕೆ ಅದು ಕುಂಟಾಡಿಗೆ ದೇವರು ನಾನೆ, ದೈವವೂ ನಾನೆ ಎಂಬ ಮಾತಿನೊಂದಿಗೆ ಕುಂಟಾಡಿದ ಲೆಕ್ಕೆಸಿರಿ (ಈಗ ರಕ್ತೆಶ್ವರಿ ಎಂದು ಕರೆಯುತ್ತಾರೆ) ಆಗಿ ಈಗ ವಿಜೃಂಭಣೆಯಿಂದ ಊರು ಕೂಡುಕಟ್ಟಿನಿಂದ ರಥ,ಬಲಿ,ಪೂಜೆ, ಜಾತ್ರೆ,ನೇಮ ನಡೆಯುತ್ತದೆ.

೮.ಬೊಳ್ಳುರ ಗುತ್ತಿನ ಒಕ್ಕೆಲು ಸಕ್ಕೆಲಿನಲ್ಲಿ ಇದ್ದ ಕುಂಟದೂಮ ಬೈದ್ಯನಿಗೆ ಒಳಿದ ಕೊಂಗನಾಡ ಸತ್ಯ ಪೊಸಪ್ಪೆ(ಪೊಸ ಬೂತ,ಹೊಸಮ್ಮ). ಹೌದು.. ಸತ್ಯಜಾವದೆ ಎಂದು ಕರೆಯುವ ಪೊಸಪ್ಪೆಗೆ ಕೆಲವೆಡೆಗಳಲ್ಲಿ ಪಂಚಕಜ್ಜಾಯ ಬಡಿಸುವುದು ಹೊರತು ಕೋಳಿ ಅಗೆಲು ನಡೆಯುವುದಿಲ್ಲ.ಕೆಲವೆಡೆಗಳಲ್ಲಿ ಕೋಳಿ ಬಿಂದು ಇರುತ್ತದೆ.
ಆದರೆ ಬೈದ್ಯನಾದ ಕುಂಟದೂಮ ಎಂಬವರು ಒಕ್ಕೆಲು ಭೂಮಿಯಲ್ಲಿ ಇದ್ದುದರಿಂದ, ಈ ಕೆಳಗಿನ ಭೂಮಿ ನಾನು ಒಕ್ಕೆಲಿನಲ್ಲಿರುವುದು, ಆದ್ದರಿಂದ ನಾನು ನಿನಗೆ ತಾಳೆಮರದ ಕೊಡಿಯಲ್ಲಿ ಅಸುರಕ್ರೀಯೆಯಲ್ಲಿ ಕೋಳಿ ಪದಾರ್ಥದ ಅಗೆಲು ಮತ್ತು ಕಂದೇಲು ಸೇಂದಿ ಇಟ್ಟು ಅಸುರಕ್ರೀಯೆಯಲ್ಲಿ ಆರಾಧಿಸುತ್ತೆನೆ ಎಂದು ಆರಾಧಿಸಿದುದರಿಂದ, ಕುಂಟದೂಮನ ಕಟ್ಟಿನ ದೈವವಾಗಿ ಸತ್ಯಜಾವದೆ ಆರಾಧನೆ ಪಡೆಯಿತು ಎಂಬ ಮಾತಿದೆ.

೯.ಮರದ ಕುಳಿತುಕೊಳ್ಳುವ ಮಣೆಯಿಂದ ಹೊರಟ ದೈವಕ್ಕೆ ಇಂದು ವಿಜೃಂಭಣೆಯ ಜಾತ್ರೆಯವರೆಗೆ. ಉಲ್ಲಾಲ್ದಿಯ ನಡೆ ಎಂದೆ ಪ್ರಸಿದ್ಧಿ ಪಡೆದ ಬಿಲ್ಲವರ ಬಾಕೀಲ ಮನೆಯಿಂದ ಅಂದಿನ ಕಾಲದಲ್ಲಿ ಮನೆಯ ಯಜಮಾನ ಕುಳಿತುಕೊಂಡು ಊಟ ಉನ್ನುತ್ತಿದ್ದ ಒಂದು ಮರದ ಮಣೆಯೊಂದು ಇತ್ತು.ಅ ಯಜಮಾನ ತೀರಿಕೊಂಡಾಗ ಆಗಿನ ಕಾಲದ ಆಳಿಯ ಕಟ್ಟಿನ ಕ್ರಮದಂತೆ ವಿಧವೆಯಾದ ಹೆಂಗಸು ತನ್ನ ತವರು ಮನೆಗೆ ಕುಂಟು ಕುಡ್ತುದು ಪೊಪಿನ ಕ್ರಮದಂತೆ,ಅ ಯಜಮಾನನ ಹೆಂಡತಿಯಾಗಿದ್ದ ದೇಯಿ ಬೈದೆತಿ ಎಂಬವರು ಅಳುತ್ತ ಚಾವಡಿಯಲ್ಲಿದ್ದ ಸತ್ಯಜಾವದೆಗೆ ಕೈಮುಗಿದು,ತನ್ನ ಗಂಡ ಕುಳಿತುಕೊಳ್ಳುತ್ತಿದ್ದ ಕೇವಲ ಒಂದು ಮಣೆಯನ್ನು ತನ್ನ ತವರುಮನೆ ಪಲ್ಲತ್ತಡ್ಕಕ್ಕೆ ಹಿಡಿದುಕೊಂಡು ಬಂದಾಗ, ಅವರನ್ನು ಬೆನ್ನತ್ತಿಕೊಂಡು ಬಂದ ಪೊಸಪ್ಪೆ ದೈವವು ಅವರಿಂದ ಆರಾಧನೆ ಪಡೆದುಕೊಂಡು,ಮುಂದಕ್ಕೆ ಅಲ್ಲಿ ಕಾರ್ನಿಕ ತೋರಿ ಗ್ರಾಮ ಕೂಡುವಿಕೆಯಿಂದ,ಪರವೂರಿನ ಭಕ್ತರ ಕೂಡುವಿಕೆಯಿಂದ ಅದ್ದೂರಿಯಾಗಿ ನೇಮ ಜಾತ್ರೆ ನಡೆಯುತ್ತಿದೆ‌.

೧೦.ಮೈಂದಬಾಲೆ ನರಸಿಂಗ ಬೈದ್ಯರಿಗೆ ಜೋಗ ಬಂದ ಅಣ್ಣಪ್ಪ ಪಂಜುರ್ಲಿ.ಈ ಬಗ್ಗೆ ಪಾರ್ಧನದಲ್ಲಿ ನರಸಿಂಗ ಬೈದ್ಯರ ಉಲ್ಲೇಖ ಬರುತ್ತದೆ. ಮುಗೇರ ಚಾವಡಿನು ಬುಡಿಯೆ ದೈವ, ಅಡ್ಡಂದ ಸುದೆನು ಕಡತೆ,ಕಡೆ ಶಿವಾಲಯ ನರಸಿಂಗ ದೇವೆರೆ ಸ್ಥಳಟ್ಟು ಅಯೆ. ಒಂಜಿ ವರ್ಷ ಅಜಿ ತಿಂಗೊಳುಡು ದೇವೆರೆ ಬಲಭಾಗೊಡು ಬಂಟೆಂದು ಪನ್ಪಾಯೆ. ಒಂಜಿ ವರ್ಷ ಅಜಿ ತಿಂಗೊಳು ಕರಿಯೊಂದು ಬನ್ನಗ ಕಡೆಶಿವಾಲಯ ನರಸಿಂಗೆ ದೇವೆರೆನ ಸ್ಥಳಟ್ಟು ವರ್ಷಗೊಂಜಿ ಕೊಡಿಯೆರಿ ಅಯನ ಅಪುಂಡು. ಅಯ್ಕು ಕಲ್ತೆಡು ವೊಲೆ, ಬಯ್ಯಡು ಮಾನಿ ಕೊಳಕೀರ ಜನನದ ಬಾರೆದಲ್ತ ಬೂಡುಗು ಬೈದುಂಡುಯೆ. ಯೆಂಕ್ಲೆಗು ಕಡೆಶಿವಾಲಯ ನರಸಿಂಗ ದೇವೆರೆ ಸ್ಥಳಕ್ಕು ಪೊಯೆರೆ ಯೆಂಕ್ಲೆನ ದಂಡ್ಯೆ ಸಿಂಗಾರ ಮನ್ಪೆರೆ ಯೆರೊರಿ ಉಲ್ಲೆ ಪಂಡುದು ಪನ್ಪೆರು.ಕುದುರೆಬೊಟ್ಟೊಡು ಕೊಡ್ಮನು ನಟ್ಟಿಲ್ಲಲು ಮೈಂದಬಾಲೆ ನರಶಿಂಗ ಬೈದೆ ಉಲ್ಲೆಸುದ್ದಿ ವರ್ತಮಾನ ಕೆಂಡೆರು. ಘಳಿಗೆ ಸಂಕ್ಯಗು ವೊಲೆನು ಬರೆಯೆರು.ವೊಲೆದ ಮಾನ್ಯನು ಲೆತ್ತೆರು, ಸಾದಿಗು ಸೇಜ,ಬಂಜಿಗು ಬಾಟಾನೆ ಕೊರಿಯೆರು. ಸೆರೆಂಗ್ಡು ಕಟ್ಟುದು ವೊಲೆದ ಮಾನಿ ಕೊಳಕೀರು ಜನಾನಂದದ, ಬಾರೆದಲ್ತ ಬೂಡುನು ಬುಡಿಯೆ,ಕುದುರೆ ಬೊಟ್ಟು ಕುಡ್ಮನು ನಟ್ಟಿಲ್ಲಡೆಗುಬರುವೆ. ಮೈಂದ ಬಾರೆ ನರಶಿಂಗ ಬೈದನು ತೂಯೆ. ಸೆರಂಗುರ್ದು ವೊಲೆ ಗಿಚ್ಚಾದು ಕೊರಿಯೆ. ವೊಲೆ ತೂಯಿನಂಚಿತ್ತಿ ನರಸಿಂಗ ಬಾಲೆ ಬೈದೆ ಕಡಿರಡು ಅಯ್ತ ಸಿಂಗಾರ ಅಯೆ. ದುಂಬುರ್ದು ವೊಲೆದ ಮಾನಿ ಬರುವೆರು ಪಿರವುರ್ದು ಮೈಂದ ಬಾಲೆ ನರಸಿಂಗ ಬರುವೆರು. ಬಾರೆದಲ್ತ ಬೂಡುಗು ಬರುವೆರು. ತಗ್ಗುಲ್ಲ ನಿಲೆಟ್ಟು ಉಂತ್ಯೆ, ಸಾರಲು ಸಾರಕುಲ್ಲಾಯನು ತೂಯೆ,ಆಳುದ ಅವದಾನ ಸೋಲುದ ಸೊಲ್ಮೆನು ಸಂದಾಯೆ. ಬತ್ತಿನ ಯೆಡ್ಯಾಂಡು ಮೈಂದ ಬಾಲೆ ನರಸಿಂಗ ಬೈದ್ಯ. ಯೆಂಕ್ಲೆಗು ಕಡೆ ಶಿವಾಲಯದ ದೇವೆರೆ ಸ್ಥಳಟ್ಟು ವರ್ಷಗೊಂಜಿ ಕೊಡಿಯೆರಿ,ಆಯನ ಅಂಕದ ಮಿನದನ ತೂಯರೆ ಒಂಜಿ ವೊಲೆ, ಒಂಜಿ ಮಾನಿ ಬೈದೆ. ಯೆಂಕಲೆಗು ಪೊಯೆರೆ ಯೆಂಕ್ಲೆನ ದಂಡ್ಯ ಸಿಂಗಾರ ಮನ್ಪೊಡು ಪಂಡುದು ಪನ್ಪೆರು. ಅತ್ ಪೊರ್ತುಗು ಮೈಂದ ಬಾಲೆ ನರಸಿಂಗ ಬೈದ್ಯೆ ಪನ್ಪೆ, ಯೆನ್ನ ಹಿರಿಯ ಕಿರಿಯಾಕ್ಲು ದಂಡ್ಯೆದ ಬೇಲೆ ಮಂತುದೆರು, ಯೆನ್ನ ಸಮ್ಮಲೆಕುಲು ದಂಡ್ಯೆದ ಬೆಲೆ ಮಂತುದೆರು, ಯೆಂಕ್ ದಂಡ್ಯೆದ ಮುತ್ತೆಸನ ಕೊರ್ಲೆ ಪನ್ಪೆ. ಮೈಂದ ನರಸಿಂಗ ಬೈದಗು ಸಾರಲು ಸಾರಕುಳ್ಳಾಯೆ ಬೊಳ್ಳಿ ಕಟ್ಟಿ ಬಿಸತ್ತಿ ಕೊರಿಯೆರು,ಬೊಳ್ಳು ತಂತ್ರ ಕೊರಿಯೆರು. ಮೈಂದ ನರಸಿಂಗ ಬೈದೆ ದಂಡ್ಯೆ ಸಿಂಗಾರ ಮಲ್ತೆ, ದಂಡೆಕೆತ್ತುನ ಕಟ್ಟೆಡು ದಂಡೆನು ಕರ್ತೆ. ದೊಂಬರತುಂಡು ಗಾಳಿ ಬಿಜಿಂಡು,ಸಾರಾಲು ಸಾರ ಉಲ್ಲಾಯೆ ದಂಡೆಡು ವಾಲಗ ಅಯೆರು,ಬಾರೆದಲ್ತ ಬೂಡುನು ಬುಡಿಯೆರು, ದೆನಿಲಗುಡ್ಡೆ ,ಪರನೀಲ ಬೈಲುನು ಕಡತುದು,ಯಯ್ ಕರ್ತುಲು,ಸತ್ಯದ ಮಜಲುನು ಕಡತೆರು,ಪಲಾಯೆ ಮಾಡನು ಕಡತುದು,ಕಡೆಶಿವಾಲಯ ನರಸಿಂಗ ದೇವೆರ ಸ್ಥಳಕ್ಕು ಬನ್ನಗ,ದೇವೆರು ತೇರುಡು ವೊಲಾಗ ಅತೆರು,ಯಾದಲ್ವೆರೆಚ್ಚೆಡು ಐವೆರ್ ಉಳ್ಳಾಕುಳು ಜೋಗ ಪತ್ಯೆರು.ಅಂಚಿ ತೂದು ಇಂಚಿ ತೂದು ಮೈಂದ ಬಾಲೆ ನರಸಿಂಗ ಬೈದ್ಯನ ಮಿತ್ತು ದೈವ ಕಲ್ಕು ದೆರ್ತೊಂದು ಬತ್ತೆ.ದೈವದ ಪೊರ್ಲುನು ಸಾರಾಲ್ ಸಾರಕುಲ್ಲಾಯೆ ತೂಯೆ,ಅಕ್ಲೆನ ಪೊರ್ಲುನು ದೈವ ತೂಯೆ,ನಿಕುಲು ಇತ್ತಿಂಚಿನ ರಾಜ್ಯೊಗು ಬರ್ಪೆ ಪಂಡೆ. ಅತ್ ಪೊರ್ತುಗು ಸಾರಾಲು ಸಾರ ಉಳ್ಳಾಯೆ ಪನ್ಪೆರ್ಬರ್ಪುನ ದೈವನು ಯೆಂಕುಲು ಬರೊಚ್ಚಿಂದು ಪನ್ಪುಜ,ಬರಂದುನ ದೈವನು ಬಲಂದು ಯೆಂಕುಲು ಲೆಪ್ಪುಜಿ.
ನಯ ಮೀರ್ದು ಬತ್ತುಂಡ ಯೆಂಕುಲು ಇತ್ತಿನ ರಾಜ್ಯಡು ವೊರುಂದ ಮೆಚ್ಚಿನು ನಿಕ್ಕು ಕೊರ್ಪದುಂಬುರ್ದು ಸಾರಾಳ ಸಾರ ಉಲ್ಲಾಯೆ ಬರ್ವೆರು, ಪಿರವುರ್ದು ದೈವ ಬರುವೆ.ಕಡೆಶಿವಾಲಯ ನರಸಿಂಗ ದೇವೆರೆ ಸ್ಥಳನು ಬುಡಿಯೆರು, ಬಾರೆದಲ್ತ ಬೂಡುಗು ಬರುವೆರು,ಬಾರೆದಲ್ತ ಬೂಡುಡು ಕಲ್ಲ ಜುಪ್ಪೆ ಕಟ್ಟಾಯೆರು,ಕತ್ತೆರ್ ಮಂಚವು ಪಾಡ್ಯೆರು. ಪಟ್ಟೆಡು ಕೊಡ ಪಾಡ್ಯೆರು,ಪಂಜಿದ ಪಾಪೆ ದೀಪಾಯೆರು.ಉಳ್ಳಾಕುಲೆ ಬಲತ್ತ ಬಾಗದ ಬಂಟೆ ಪಂಡುದು ಪನ್ಪಾಯೆ. ಎಂಬ
ಉಲ್ಲೇಖ ಈ ರೀತಿಯಲ್ಲಿ ಮೈಂದಬಾಲೆ ನರಸಿಂಗ ಬೈದ್ಯನಿಗೆ ದೈವ ಜೋಗಕ್ಕೆ ಬಂದ ಕಥೆ ಬರುತ್ತದೆ.

೧೧.ಕದಿರೆಯ ಕಾಲಾದ್ರಿ ದೈವವನ್ನು ನಂಬಿದ ನಡ್ಲಾಯ ಬರ್ಕೆಯ ಒತ್ತು ಕುಂದು ಬೈದೆತಿ.ತನಗೆ ಮಕ್ಕಳಾಗಲಿಲ್ಲವೆಂದು ಕದ್ರಿಯ ಕಾಂತು ದೇವರಿಗೆ ಹರಿಕೆ ಹೇಳಿ, ಅದನ್ನು ಒಪ್ಪಿಸಲು ಕದ್ರಿಗೆ ಹೋದಾಗ ಅಲ್ಲಿದ್ದ ಕಾಲಾದ್ರಿ ದೈವವು ಇವಳ ಹಿಂದೆ ಬರುತ್ತದೆ. ಅದನ್ನು ನಡ್ಲಾಯ ಬರ್ಕೆಯಲ್ಲಿ ನಂಬುತ್ತಾರೆ.ಮುಂದೆ ಅದು ತುಳುನಾಡಿನಲ್ಲಿ ಪ್ರಸರಣಗೊಳ್ಳುತ್ತದೆ.

೧೨.ಮಂತ್ರಜಾವದೆಯನ್ನು ಕರೆತಂದ ಕರಿಯಕಾಂತು ಬೈದ್ಯ.
ಇರುವೈಲು ಕಟ್ಟೆಮಾರು ವ್ಯಾಪ್ತಿಯ ಸೂಂತಲಾಡಿ ಬರ್ಕೆಯ ಗಂಗುಬೈದೆತಿಯ ಮಗ ಕರಿಯಕಾಂತು ಬೈದ್ಯ ತನ್ನ ಬಾರೀಕೆಯಲ್ಲಿ ಅಗುತ್ತಿದ್ದ ಕಳ್ಳ ಕಾಕರ ಉಪದ್ರವವನ್ನು ತಡೆಯಲು ಕೇರಳ ಭಾಗದ ಕುಂಟಾಲಕ್ಕೆ ಹೋಗಿ ಕುಂಟಲಾ ಜಂತ್ರಿ,ತಂತ್ರಿಯವರ ನಿರ್ದೇಶನದಂತೆ ದೇಶ ತಿರುಗಿ,ಭಾಷೆ ಕಳಿತು ಅವರಿಂದ ಮಂತ್ರಜಾವದೆ ಎಂಬ ದೈವವನ್ನು ತಂದು ಆರಾಧಿಸುತ್ತಾರೆ.ಮುಂದಕ್ಕೆ ಇದು ತುಳುನಾಡಿನಾದ್ಯಂತ‌ ಕಾರ್ನಿಕ ಶಕ್ತಿಯಾಗಿ ಪ್ರಸರಣೆಗೊಳ್ಳುತ್ತದೆ.
-More details : <a href=/2020/08/02/mantrajavade/>ಪುಟ್ಟು ಸಾವು ದಾಂತಿ ಸತ್ಯ ಮಂತ್ರಜಾವದೆ

೧೩.ಸುಜೀರು ಭಂಡಾರ ಮನೆಯ ದೇಯಿ ಬೈದೆತಿಯು ನದಿಯಲ್ಲಿ ಮೊಗದ ರೂಪದಲ್ಲಿ ಸಿಕ್ಕಿದ ತನ್ನ ಆರಾಧ್ಯ ದೈವ ವೈದ್ಯನಾಥನ ಅನುಗ್ರಹದಿಂದ ಮತ್ತು ತನ್ನ ತೀಕ್ಷ್ಣ ಬುದ್ದಿವಂತಿಗೆಯಿಂದ ತಂತ್ರಹೂಡಿ ಬಂಗರಸರಿಗೆ ಯುದ್ದದಲ್ಲಿ ಜಯ ಸಿಗುವಂತೆ ಮಾಡಿ,ಅವರಿಂದ ಉತ್ತೊರುಂಬಲಿ ಪಡೆದು,ಮುಂದಕ್ಕೆ ಅ ದೈವಕ್ಕೆ ಹತ್ತು ಹದಿನಾರು ಗ್ರಾಮ ಸಮಸ್ತರು ಕೂಡಿ ಗ್ರಾಮದಲ್ಲಿ ನೇಮ ನಡೆಯುತ್ತದೆ.ಇಂದಿಗೂ ಸುಜೀರು ಭಂಡಾರದ ಮನೆಯಲ್ಲಿ ದೇಯಿ ಬೈದೆತಿಗೆ ಆರಾಧನೆ ಇದೆ.

೧೪.ಕೊರಗುಲೆ ತನಿಯನನ್ನು ಸಾಕಿದ ಬೀರಕ್ಕೆ ಬೈದೆತಿ.
ತುಳುನಾಡಿನಾದ್ಯಂತ ಆರಾಧನೆಗೊಳ್ಳುವ ಈ ಶಕ್ತಿ,ಬಾಲ್ಯದಲ್ಲಿ ಕೊರಗುಲೆ ತನಿಯ ಎಂಬ ಹುಡುಗನನ್ನು ಎಣ್ಸೂರ ಬರ್ಕೆಯ ಮೈರಕ್ಕೆ ಬೈದೆತಿ,ಮಗಳು ಮಂಜಕ್ಕೆ ಬೈದೆತಿ,ಮಗ ಚೆನ್ನಯ್ಯ ಬೈದ್ಯ ದಾರಿಯಲ್ಲಿ ನೋಡಿ ಮನೆಗೆ ಕರೆದುಕೊಂಡು ಹೋಗಿ ಸಾಕುತ್ತಾರೆ.ಮುಂದಕ್ಕೆ ಇವ ಸತ್ಯದ ಮಗನಾಗಿ ಕೊರಗಜ್ಜ ಎಂಬ ಹೆಸರಿನಿಂದ ತುಳುನಾಡಿನಾದ್ಯಂತ ಪ್ರಸರಣೆಕೊಳ್ಳುತ್ತಾನೆ.

೧೫.ಕೋಟೆಕಾರು ತಂಕರು ಬೈದೆತಿಯ ಮಗ ಸಿದ್ದಮರ್ದ ಬೈದ್ಯನಿಗೆ ಜೋಗಿ ಪುರುಷರಿಂದ ದೀಕ್ಷೆ ಆಗಿ,ನಂತರ ವೈದ್ಯನಾಥ ದೈವವನ್ನು ಪಾಲಿಸಿಕೊಂಡು ಬರುತ್ತಾರೆ. ಹಾಗೆಯೇ ಕಂರ್ಬಿ ಬೈದೆತಿಗೆ ಕರ್ಗಲ್ಲ ಕೋಟೆ ಎಂಬಲ್ಲಿ ದೈವ ವೈದ್ಯನಾಥ ಕಾರ್ನಿಕ ತೋರಿ ನಂತರ ಅವಳು ಅ ದೈವವನ್ನು ಆರಾಧಿಸಿ ಕಂರ್ಬಿಸಾನದ ವೈದ್ಯನಾಥ ಎಂಬ ಹೆಸರು ಬಂತು.

೧೬.ಅತ್ತೆಯ ಮೋಸದಾಟಕ್ಕೆ ಬಲಿಯಾಗಿ ದೈವವಾದ ಸಹಸ್ರನಾಡು.
ತಿರ್ತ ಅಂದ್ರೆ ಕೆಳಗಿನ,ಮಿತ್ತ ಅಂದರೆ ಮೇಲಿನ ಎಂದು ತುಳುವಿನ ಅರ್ಥ.
ಮೇಲಿನ ವೈಕುಂಜದಲ್ಲಿ ಅಣ್ಣ ಸಾಯನ ಬೈದ್ಯ,ತಂಗಿ ಅಗ್ಗು ಬೈದೆತಿ ಮತ್ತು ಕೆಳಗಿನ ವೈಕುಂಜದಲ್ಲಿ ಅಣ್ಣ ಕೊಂಡಣ ಬೈದ್ಯ,ತಂಗಿ ಅಕ್ಕು ಬೈದೆತಿ.
ಮಿತ್ತ ವೈಕುಂಜದಿಂದ, ತಿರ್ತ ವೈಕುಂಜ ಬರ್ಕೆಗೆ ಇಬ್ಬರು ಇಬ್ಬರಿಗೆ ಅದಲು ಬದಲು ಮದುವೆಯಾಗಿ ಕೊಂಡಾಣ ಬೈದ್ಯ ಮತ್ತು ಅಗ್ಗು ಬೈದೆತಿಗೆ ಒಬ್ಬ ಗಂಡು ಮಗ ಹುಟ್ಟಿದ ಅವನ ಹೆಸರು ಸಹಸ್ರನಾಡು.ಒಂದು ದಿನ ಅಣ್ಣನ ಮನೆಯಾದ ಮೇಲಿನ ವೈಕುಂಜ ಬರ್ಕೆಯ ಮನೆಗೆ ಹೊರಟ ತಂಗಿ ಅಗ್ಗು ಬೈದೆತಿಗೆ ತನ್ನ ಹನ್ನೆರಡು ವರ್ಷದ ಮಗ ಸಹಸ್ರನಾಡು ನಾನು ಬರುತ್ತೆನೆ ಎಂದು ಒತ್ತಾಸೆ ಇಟ್ಟಾಗ,ನೀನು ಬರುವುದು ಬೇಡ,ನಮ್ಮ ಅಳಿಯ ಕಟ್ಟಿನ ಪ್ರಕಾರ ಮಾವ ನಿನ್ನನ್ನು ಹಕ್ಕಿನ ಅಳಿಯ ಎಂದು ಅಲ್ಲೆ ಕೂರಿಸಿಕೊಳ್ಳುತ್ತಾರೆ ಎಂದಳು ಅಮ್ಮ.ಆದರೆ ಅದ್ಯಾವುದನ್ನೂ ಒಪ್ಪದೇ ಹಠಕ್ಕೆ ಬಿದ್ದ ಸಹಸ್ರನಾಡು ಅಮ್ಮನೊಂದಿಗೆ ಹೊರಟುನಿಂತು ಮಾವನಿಗೆ ಸಂತಸಪಡಿಸಲು ಹಲವಾರು ಸೊತ್ತುಗಳು ತೆಗೆದುಕೊಂಡು ಮೇಲಿನ ವೈಕುಂಜ ಬರ್ಕೆಗೆ ಬಂದ.ಮೂರು ದಿನ ಅಲ್ಲಿ ನಿಂತು ಸಮ್ಮನ ಗಮ್ಮತು ತಿಂದು ಅಮ್ಮ ಮಗ ಹೊರಡುವ ಸಿದ್ದತೆಯಲ್ಲಿದ್ದಾಗ,ಅಣ್ಣ ಸಾಯನ ಬೈದ್ಯ ತಂಗಿಯಲ್ಲಿ ತನ್ನ ಹಕ್ಕಿನ ಅಳಿಯನನ್ನು ಇಲ್ಲೆ ಬಿಟ್ಟು ಹೋಗುವಂತೆ ಹೇಳುತ್ತಾನೆ.ಒಲ್ಲದ ಮನಸ್ಸಿನಿಂದ ಸಹಸ್ರನಾಡುನನ್ನು ಅಲ್ಲೆ ಬಿಟ್ಟು ಹೋಗುತ್ತಾಳೆ.ಸಹಸ್ರನಾಡು ಅಲ್ಲೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ. ಸ್ವಲ್ಪ ದಿನ ಕಳೆದಾಗ ಮಾವ ಸಾಯನ ಬೈದ್ಯ ದಂಡುಸಾದಿಸಲು ದಂಡಿನ ರಾಜ್ಯಕ್ಕೆ ಹೊರಟಾಗ ಅಳಿಯನಿಗೆ ಮನೆಯ ಜವಾಬ್ದಾರಿ ವಹಿಸಿ ದಂಡು ಸಾದ್ಯಲು ಹೊರಟರು.ಮೂರ್ತೆದಾರಿಕೆ ಮತ್ತು ಭಾರಿಕೆ ಮನೆಯ ಸರ್ವ ಜವಾಬ್ದಾರಿ ಹೊತ್ತಿದ್ದ ಆಳಿಯನ ಮೇಲೆ ಮಾವನ ಹೆಂಡತಿಯಾದ ಅತ್ತೆಗೆ ತನಗೆ ಬರಬೇಕಿದ್ದ ಅಸ್ತಿ ಅಧಿಕಾರ ಅಳಿಯನಿಗೆ ಹೋಯಿತು ಎಂಬ ಕಿಚ್ಚು ಮತ್ಸರ ಉಂಟಾಯಿತು.ತಾನು ಆಳಿಯನ ಮೇಲೆ ಕುತಂತ್ರ ಹೆಣೆದಳು.ಒಂದು ದಿನ ಸಹಸ್ರನಾಡು ಮೂರ್ತೆಗೆ ಹೋಗಿದ್ದಾಗ, ಏಳು ಗೂಡಿನ ಕೋಳಿಗಳನ್ನು ಮಾರಿ ಮುಗಿಸಿದಳು.ಏಳು ಭರಣಿ ಉಪ್ಪಿನಕಾಯಿ ಹಂಚಿ ಮುಗಿಸಿದಳು.ಏಳು ಕೊಡ ಸೇಂದಿಯನ್ನು‌ ಮಾರಿ ಮುಗಿಸಿ,ಸಹಸ್ರನಾಡು ಮನೆಗೆ ಬಂದು ಊಟ ಕೇಳುವಾಗ ಅವನಿಗೆ ತೊಳೆದ ಅಕ್ಕಿನೀರು ಕೊಟ್ಟಲು.ಅವಾಗ ಸಹಸ್ರನಾಡು ಮನೆಯ ಒಂದು ಕೋಳಿಯನ್ನು ಕೊಂದು ಪದಾರ್ಥ ಮಾಡಿ ತಾಳೆಮರದ ಕೊಡಿಗೆ ಹೋಗಿ ಸೇಂದಿ ಮತ್ತು ಕೋಳಿ ಪದಾರ್ಥ ತಿಂದ.ಅ ಹೊತ್ತಿಗೆ ಸಾಯನ ಬೈದ್ಯ ದಂಡುಯಾತ್ರೆ ಮುಗಿಸಿ ಬರುವಾಗ,ಅರ್ಧ ದಾರಿಗೆ ಹೋಗಿ ಅವನ ಹೆಂಡತಿ ಇವನ ಬಗ್ಗೆ ಇಲ್ಲಸಲ್ಲದ ಚಾಡಿ ತರ್ಲೆ ಹೇಳಿದಳು.ಸತ್ಯ ಮಿಥ್ಯ ಪರಮರ್ಶಿಸದೇ ಸಾಯನ ಬೈದ್ಯ ಅಳಿಯನನ್ನು ತಾಳೆ‌ಮರದಿಂದ ಇಳಿಯುವಂತೆ ಹೇಳಿದ, ಹೆದರಿಕೆಯಿಂದ ಇಳಿಯುತ್ತ ಬರುತ್ತಿದ್ದ ಆಳಿಯ ಸಹಸ್ರನಾಡುನನ್ನು ನೆಲಕ್ಕೆ ಇಳಿಯುವ ಮೊದಲೇ ಎಳೆದು ಹಾಕಿ, ಚೆನ್ನಾಗಿ ಹೊಡೆದು ಬಡಿದು ನಂತರ ತನ್ನಲ್ಲಿದ್ದ ತರ್ಕತ್ತಿಯಲ್ಲಿ ಬಾಳೆದಿಂಡನ್ನು ಕೊಚ್ಚಿದ ಹಾಗೆ ಕೊಚ್ಚಿ ಅತನ ದೇಹವನ್ನು ಕುಂಟಾಲ ಗುಂಡಿಗೆ ಹಾಕಿದ್ರು.ಅಲ್ಲಿಂದ ಸಹಸ್ರನಾಡು ಕುಂಟಲ್ದಾಯ ಎಂಬ ಹೆಸರಿನಿಂದ ದೈವವಾಗಿ ಎದ್ದು ಬಂದ.ಮುಂದಕ್ಕೆ ಕುಂಟಲ್ದಾಯ ದೈವವಾಗಿ ಮೆರೆದ.

೧೭.ಉಬಾರ ಕನ್ಯಾತೀರ್ಥ ಸ್ನಾನ ಮಾಡುವ ಮಖೆ ಜಾತ್ರೆ ತುಳುನಾಡಿನಾದ್ಯಂತ ಭಾರಿ ಜನಪ್ರಿಯ,ಅದರ ನಂತರ ಪ್ರಧಾನವಾಗಿ ಇರುವ ಮಾಂಕಾಳಿ ಅಮ್ಮನ ನೇಮದಲ್ಲಿ ಅವರ ಅತಿ ಎತ್ತರದ ಅಣಿಮುಡಿ ಎತ್ತಿ ಬೂತಬಲಿಗೆ ಒತ್ತುಕೊಟ್ಟ ನಾಲ್ವರು ಬೈದ್ಯರು. ತುಳುನಾಡಿನ ಪೆರಿಯುಳ್ಳ ಗಂಗೆ ಎಂದು ಕರೆಯುವ ಉಪ್ಪಿನಂಗಡಿಯಲ್ಲಿ ಮೂರು ಮಖೆಜಾತ್ರೆ ನಡೆದ ನಂತರ,ಮಂಕಾಳಿ ಅಮ್ಮನವರ ವಿಜೃಂಭಣೆಯಿಂದ ನೇಮ ನಡೆಯುವಾಗ, ಅದಕ್ಕೆ ಸಾವಿರ ಹಾಳೆಯ ಎತ್ತರದ ಅಣಿಮುಡಿ ಏರುವ ಕ್ರಮವಿದೆ.ಇದನ್ನು ಉಪ್ಪಿನಂಗಡಿ ಮಾಗಣೆಯ ನಾಲ್ವರು ಬಿಲ್ಲವ ಬೊಂಟ್ರರು ಕೊಪ್ಪಳ ಕೋಚ ಬೈದ್ಯ,ಅರ್ತಿಲ ದುಗ್ಗಬೈದ್ಯ,ಪಾಡೆಂಕಿ ಮುದರ ಬೈದ್ಯ,ಕಲ್ಯಾಟೆ ದೇರ ಬೈದ್ಯ ಎಂಬವರು ಬಿದಿರಿನ ಕೋಲಿನಿಂದ ಎತ್ತುತ್ತ ಸುತ್ತು ಬರುವ ಕ್ರಮ.ಈಗಲೂ ಈ ಕ್ರಮ ಮುಂದುವರೆಯುತ್ತ ಬಂದಿದೆ.

೧೮.ಅಂದಿನ ಗ್ಲಾಂಪಾಡಿ ಎನ್ನುವ ಇಂದಿನ ಇಚೀಲಂಪಾಡಿ ಉಲ್ಲಾಕ್ಲೆ ದೈವದ ನೇಮದಲ್ಲಿ ಕರೆಯುವ ಬೀಜೆರು ಈಡುಕಾರ ದೇವು ಬೈದ್ಯರು. ಒಂದು ಕಾಲದಲ್ಲಿ ಈಡುಗಾರಿಕೆಯಲ್ಲಿ ಭಾರಿ ಪರಿಣಿತಿ ಪಡೆದಿದ್ದ ಬೀಜೆರು ಬಾರೀಕೆ ಮನೆಯ ಈಡುಕಾರ ದೇವು ಬೈದ್ಯರು,ಉಲ್ಲಾಕ್ಲು ದೈವದ ಮರದ ಕುದುರೆ,ಮಾಯದ ಕುದುರೆಯಾಗಿ ಪಟ್ಟೆತಿಮಾರಿಗೆ ರಾತ್ರಿ ಗದ್ದೆ ಮೇಯಲು ಹೋಗುತ್ತವೆ. ಆದರೆ ಜನರಿಗೆ ಗದ್ದೆ ನಾಶ ಮಾಡುವ ಇದು ಯಾವ ಪ್ರಾಣಿಗಳ ಉಪದ್ರವ ಎಂದು ತಿಳಿಯುವುದಿಲ್ಲ.ಕೊನೆಗೆ ಈಡುಕಾರ ದೇವು ಬೈದ್ಯರಿಗೆ ವಿಚಾರ ತಿಳಿಸುತ್ತಾರೆ. ಈಡುಕಾರ ದೇವು ಬೈದ್ಯರು ರಾತ್ರಿ ಹೊತ್ತು ಕಾದು ಕುಳಿತು ಅ ಕುದುರೆಗೆ ಹೊಡೆಯುತ್ತಾರೆ.ಕುದುರೆಗೆ ಹೊಡೆದ ಗುಂಡು ತಾಗುತ್ತದೆ.ಕೊನೆಗೆ ಉಲ್ಲಾಕ್ಲೆ ನೇಮದಲ್ಲಿ ಈ ವಿಚಾರ ಗೊತ್ತಾಗುತ್ತದೆ. ಈಗಲೂ ಇಚಿಲಂಪಾಡಿಯ ಉಲ್ಲಾಕ್ಲು ದೈವದ ನೇಮದಲ್ಲಿ ಈಡುಕಾರ ದೇವು ಬೈದ್ಯ ಎಂದು ಹೆಸರು ಉಲ್ಲೇಖ ಮಾಡುವ ಕ್ರಮ ಇದೆ.

೧೯.ಕೊರಗಬೈದ್ಯರ ಮನೆಗೆ ನುಗ್ಗಿ ಕುಪ್ಪೆಟ್ಟುದಕ್ಲು ಎಂದು ಹೇಳಿಸಿದ ದೈವಗಳು.
ಕುಪ್ಪೆಟ್ಟು ಬರ್ಕೆಯ ನಾಡು ಬೈದ್ಯರ ಮಗ ಕೊರಗ ಬೈದ್ಯರು ಬಾಲ್ಯ ಕಳೆದು ಯೌವ್ವನಕ್ಕೆ ಬಂದಾಗ ಹೆಣ್ಣು ನೋಡಲು ಪೊಣ್ಣಂಗಿಲಾ ಸಾರಲಾ ಪಟ್ಟದ ಪೊನ್ನಂಗಿಲಾ ಬೀರಣ್ಣ ಬೈದ್ಯರ ಮಗಳನ್ನು ನೋಡಿ, ಸಂಬಂಧ ಕೂಡಿಬಂದು ಪೊನ್ನಂಗಿಲಾದ ಹೆಣ್ಣಿನ ಮನೆಯಲ್ಲಿ ಮದುವೆಯಾದರು.ಆಗ ಅಲ್ಲಿನ ಕಲ್ಲುರ್ಟಿ ಪಂಜುರ್ಲಿ ದೈವಗಳು ಮದುವೆಯಾದ ಹೆಣ್ಣಿನ ಹಿಂದೆ ಕುಪ್ಪೆಟ್ಟು ಬರ್ಕೆಗೆ ಬಂದು ತಮ್ಮನ್ನು ನಂಬುವಂತೆ ಕುಪ್ಪೆಟ್ಟು ಬರ್ಕೆಯ ಕೊರಗ ಬೈದ್ಯರಲ್ಲಿ ಕೇಳಿದಾಗ,ಬೀಗತನವನ್ನು ಬೇಕಾದರೆ ಬಿಟ್ಟು ಬಿಡುವೆ,ಆದರೆ ಬೀಗರ ಮನೆಯ ದೈವಗಳನ್ನು ನಂಬಲಾರೆ ಎಂದು ಹಠಕ್ಕೆ ಬಿದ್ದು ನಂಬಂದೇ ಇದ್ದಾಗ ,ಅವರನ್ನು ಶಿಕ್ಷಿಸಿ, ತನ್ನ ಸೇರಿಗೆಗೆ ಸೇರಿಸಿ ಕೊಂಡು ಕುಪ್ಪೆಟ್ಟುದಕ್ಲು ಎಂಬ ಹೆಸರಿನಿಂದ ತುಳುನಾಡಿನಲ್ಲಿ ಪ್ರಸರಣಗೊಳ್ಳುತ್ತಾರೆ.

೨೦.ಬಿರ್ಮು ಬೈದ್ಯರ ಕಾಲದಲ್ಲಿ ಉರುಂದಾರಕ್ಕೆ ನುಗ್ಗಿದ ದೈವ ಪಂಜುರ್ಲಿ.
ಅನಾದಿಕಾಲದಲ್ಲಿ ಭಾರಿ ಹೆಸರುವಾಸಿಯಾಗಿದ್ದ ಉರುಂದಾರ ಬೂಡು ಎಂದು ಹೇಳುವ ಈಗಿನ ಉರುಂದಾರ ಬರ್ಕೆಗೆ,ಪಕ್ಕಲೊಟ್ಟು ನರಸಿಂಗ ಪಕ್ಕಲರು ಮತ್ತು ಉರುಂದಾರ ಬಿರ್ಮು ಬೈದ್ಯರ ನಡುವಿನ ಅಯನ್ಯಾಯದಲ್ಲಿ ಉರುಂದಾರಕ್ಕೆ ಬಂದು ಆರಾಧನೆ ಪಡೆದ ಎಡ್ತೂರ ಪಂಜುರ್ಲಿ ಮುಂದಕ್ಕೆ ಉರುಂದಾರ ಪಂಜುರ್ಲಿ, ಉರುಂದ್ರಾಯ ಪಂಜುರ್ಲಿ ಎಂಬ ಹೆಸರು ಪಡೆದು ಬಡಗನ ತುಳುನಾಡಿನಲ್ಲಿ ಪ್ರಸರಣೆ ಅಯಿತು.

೨೧.ಜಾರದ ಬರ್ಕೆಯ ಅಬ್ಬು ಬೈದೆತಿಗೆ ಒಳಿದ ಜಾರಂದಾಯ.
ಜಾರದ ಬರ್ಕೆಯ ಅಬ್ಬು ಬೈದೆತಿಗೆ ನದಿಯಲ್ಲಿ ಕಲ್ಲಿನ ರೂಪದಿಂದ ಸಿಕ್ಕಿ,ಅದನ್ನು ಜಾರದ ಬರ್ಕೆಗೆ ತಂದು ಅದು ನಂತರ ದೈವವೆಂದು ಗೋಚರವಾಗಿ, ತನ್ನ ತಮ್ಮನಾದ ಜತ್ತಿ ಬೈದ್ಯನೊಂದಿಗೆ ಅ ದೈವಕ್ಕೆ ಜಾರದ ಬರ್ಕೆಯಲ್ಲಿ ಆರಾಧನೆ ಕೊಟ್ಟು ,ಮುಂದಕ್ಕೆ ಅದು ಜಾರಂದಾಯ ದೈವ ಎಂಬ ಹೆಸರಿನಿಂದ ಪಡುವಣ ತುಳುನಾಡಿನ ಉದ್ದಕ್ಕೂ ಪ್ರಸರಣಗೊಳ್ಳುತ್ತದೆ.

೨೨.ಶೀರ್ಲಾಲು ಮಠದ ದುಗ್ಗಣ್ಣ ಶೆಟ್ಟಿಗಾರರ ಮಗ ಮಹಲಿಂಗ ಶೆಟ್ಟಿಗಾರರ ಬಾವು ಬೇನೆಯನ್ನು ಗುಣಮಾಡಿದ ಕೂಡ್ಯನಿಲೆ ಮಂಜು ಬೀರ ಬೈದ್ಯರಿಗೆ ಏನು ಬಹುಮಾನ ಕೊಡುವ ಎಂದು ಕೇಳಿದಾಗ,ಅಸ್ತಿ ಕೊಟ್ಟರೆ ಪರರ ಪಾಲಾದಿತು,ಬೆಳ್ಳಿ,ಬಂಗಾರ ಕೊಟ್ಟರೆ ಮಾರಿ ಹೋದಿತು.ಅದ್ದರಿಂದ ನಿಮ್ಮಲ್ಲಿರುವ ಅರಸು ದೈವವನ್ನು ಕೊಡಿ ಎಂದು ಕೇಳಿದಾಗ, ಅ ಕಾಲದಲ್ಲೇ ಅನುಕೂಲವಂತರಾಗಿದ್ದ ಮಂಜು ಬೀರ ಬೈದ್ಯರ ಅಂತಸ್ತನ್ನು ನೋಡಿ ಅರಸು ದೈವವನ್ನು ಅವರಿಗೆ ಕೊಟ್ಟರು.ಅ ದೈವ ಇವರ ಬೆನ್ನು ಹಿಡಿದು ಕೂಡ್ಯ,ಕುತ್ತಿಲ,ಕರ್ತೊಡಿ,ಕರ್ಬಂಡ್ಕಕ್ಕೆ ಬಂದು ನಂತರ ಕಲಾಯ ಗುತ್ತಿನಲ್ಲಿ ನೆಲೆಯಾಯಿತು ಎಂಬ ಮಾತಿದೆ.

೨೩.ಕೊಡಮಂದಾಯನ ನೇಮದ ಮೊದಲ ಚಾಕ್ರಿ ಮಾಡಿದ ಏಳ್ವರು ಬೊಂಟ್ರರು.
ಕೊಡಮಂದಾಯ ದೈವವು ಜಂತ್ರಮಲೆ ಬಾಕ್ಯಾರುನಲ್ಲಿ ಪ್ರಕಟಗೊಂಡ ನಂತರ ಅದಕ್ಕೆ ಪೆರಿಂಜಮಾರಿನ ಪಡ್ಯಾರಬೆಟ್ಟುವಿನಲ್ಲಿ ಗ್ರಾಮಗಳು ಕೂಡುಕಟ್ಟು ಸೇರಿ ಬಂಡಿ ನೇಮ ವಿಜೃಂಭಣೆಯಿಂದ ಜಾತ್ರೆ ಆಗುವಾಗ ನಾಲ್ಕು ಪ್ರಮುಖ ಜೈನಗುತ್ತಿನೊಂದಿಗೆ,ಅ ಗ್ರಾಮದ ಸುತ್ತಮುತ್ತಲಿನ ಪ್ರಮುಖ ಬಿಲ್ಲವ ಮನೆತನಗಳಾದ ಸುದೆಕರ, ಕೈದೊಟ್ಟು, ಹಲ್ಲಬೆ, ದೇವಸ,ಕಾಜೊಟ್ಟು,ಇರ್ತಿಲ,ನೆಕ್ಕಿಲ,ಉಜಿರದೆ,ಪೇರಿಯಂತಹ ಬೊಂಟ್ರ ಮನೆತನಗಳ ಹಿರಿಯ ವ್ಯಕ್ತಿಗಳು ಕೋಳಿಗೂಟದಿಂದ ಹಿಡಿದು, ಸಿರಿ,ಸಿಯಾಳ,ಹಿಂಗಾರ,ಅಕ್ಕಿ,ಚಪ್ಪರದ ವ್ಯವಸ್ಥೆ, ಮಕರ ತೋರಣದ ವ್ಯವಸ್ಥೆಯನ್ನು ಮಾಡಿ ಸಹಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದಕ್ಕಾಗಿ ಇಂದಿಗೂ ಅಲ್ಲಿ ಕೊಡಮಂದಾಯ ದೈವವೂ ಪಾಂಡಿ ಬೈದ್ಯ, ಲಿಂಗ ಬೈದ್ಯ,ಎನ್ನಯ ಬೈದ್ಯ,ಕಾಂತು ಬೈದ್ಯ,
ದುಗನ ಬೈದ್ಯ,ಅಣ್ಣು ಬೈದ್ಯ,ಶಿವಪ್ಪ ಬೈದ್ಯ ಎಂದು ಲೆಪ್ಪು ಮರ್ಯಾದೆ ಕೊಡುತ್ತದೆ.

೨೪.ಘಟ್ಟದ ಮೇಲಿನ ಎರುಕನ್ನಡನ ಮಗಳು ಎಲ್ಯ ಗೊಣೆದಿಯ ಬೆನ್ನತ್ತಿ ಬಂದ ಪಂಜುರ್ಲಿ ದೈವವೂ,ರೆಂಜಾಲ ಬರ್ಕೆಯ ಕಾಂತಣ್ಣ ಬೈದ್ಯರು ತನ್ನ ಮಡದಿಯ ಮಾತು ಕೇಳಿ ಎಲ್ಯ ಗೊಣೆದಿಗೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಅವರ ಎಳೆಯ ತೊಟ್ಟಿಲ ಮಗುವನ್ನು ಗಿಡುಗನ ರೂಪದಲ್ಲಿ ಎತ್ತಿಕೊಂಡು ಹೋಗಿ ಅದೃಶ್ಯ ಮಾಡಿ ರೆಂಜಾಲ ಬರ್ಕೆಯಲ್ಲಿ ಗಿಡ್ರಾಯಿತ ಪಂಜುರ್ಲಿ ಎಂಬ ಹೆಸರಿನಿಂದ ಆರಾಧನೆಗೊಂಡು ಮುಂದಕ್ಕೆ ಬಡಗಣ ತುಳುನಾಡಿನಲ್ಲಿ ಪ್ರಸರಣೆಗೊಳ್ಳುತ್ತದೆ.

೨೫.ಮುಗೇರ ಸೀಮೆಯಿಂದ ಮೂರುಗ್ರಾಮಗಳನ್ನು ಕಳೆದು,ಕಟ್ಟಿಸಿದ ಮೂವರು ದೈವಗಳು, ಸುಳ್ಳಮಲೆಯಲ್ಲಿ ಅರದ್ದರು ಆರಾಧಿಸಿದ ಅರಸು ಗುಡ್ಡ ಚಾಮುಂಡಿಯೊಂದಿಗೆ ಇರುವ ಪ್ರಧಾನಿ ಮತ್ತು ಬಂಟ ದೈವಗಳಾದ ಸುಳ್ಳಮಲೆ ಪಂಜುರ್ಲಿ ಮತ್ತು ಮಲೆ ಕೊರತಿಗೆ ಬೈದ್ಯಕುಲದವರು ಪೂಜಾರ್ಮೆಯ ಚಾಕ್ರಿ ಮಾಡುತ್ತಾರೆ.

೨೬.ಮೂಡಾಣ ಕುಡುಮದಂತೆ,ಪಡುವಣ ದಿಕ್ಕಿನಲ್ಲಿ ಬಹಳ ಹೆಸರುವಾಸಿಯಾದ ಮೂವರು ದೈವಗಳ ಪ್ರಸಿದ್ಧ ಕ್ಷೇತ್ರವಾದ ಪೇರಾರದಲ್ಲಿ ದುಗ್ಗಣ್ಣ ಬೈದ್ಯರು ಬಾರಿದ ಕಬ್ಬೆತ್ತಿ ಗುತ್ತು ಇದೆ.ದುಗ್ಗಣ್ಣ ಬೈದ್ಯರ ಕಾಲದಲ್ಲಿ ಅರಸು ಉಲ್ಲಾಯ ಮತ್ತು ಬಲವಾಂಡಿ ದೈವವೂ ಕಬ್ಬೆತ್ತಿ ಗುತ್ತಿಗೆ ಬಂದು,ಅನ್ನ ಊಟ ಕೇಳಿದಾಗ, ತಜಂಕ್ ಗಿಡದ ಪದಾರ್ಥ ಮತ್ತು ಸಣ್ಣಕ್ಕಿಯ ಅನ್ನ ಮಾಡಿ ಬಡಿಸಲು ಹೋದಾಗ ದೈವಗಳು ಮನುಷ್ಯ ರೂಪ ಬಿಟ್ಟು ಅದೃಶ್ಯರಾದರು.ಹೀಗೆ ಈ ಕಥೆ ಮುಂದುವರೆದು ಈಗಲೂ ಪೇರಾರದ ದೈವಗಳ ನೈವೇದ್ಯಕ್ಕೆ ಕಬ್ಬೆತ್ತಿ ಗುತ್ತಿನಿಂದ ಸಣ್ಣಕ್ಕಿ ಕೊಡಬೇಕು ಎನ್ನುವ ಕಟ್ಟು ಬಂತು.ಮತ್ತು ಬಲವಾಂಡಿ ದೈವದ ಬಂಡಿ ಕುದುರೆಯನ್ನು ಅಲಂಕಾರ ಮಾಡುವ ಹಕ್ಕು ಕಬ್ಬೆತ್ತಿ ಗುತ್ತಿಗೆ ಸಿಕ್ಕಿತು.

೨೭.ಹುಮ್ಮದ ಬಲ್ಲಾಳ ನೀಡಿದ ದೈವ, ಮಾಂಜದ ಬರ್ಕೆದ ಹುಮ್ಮದ ಪಂಜುರ್ಲಿ.
ಘಟ್ಟದ ಮೇಲಿನಿಂದ ಬಂದ ಕನ್ನಡ ಅರಸರ ದಂಡು ಸಾರಲು ಮಾಂಜ ಬರ್ಕೆಯ ಅನಂತ ಬೈದ್ಯರಿಗೆ ಸಹಾಯಕ್ಕೆ ಹುಮ್ಮದ ಬೀಡಿನ ಬಲ್ಲಾಳರು ತನ್ನ ಪಟ್ಟದ ದೈವ ಪಂಜುರ್ಲಿನ್ನು ನೀಡುತ್ತಾರೆ.ಮುಂದೆ ಈ ದೈವ ಅನಂತ ಬೈದ್ಯರೊಂದಿಗೆ ದಂಡಿನಲ್ಲಿ ಹೋಗಿ,ದಂಡಿನಲ್ಲಿ ಜಯಿಸಿ,ಅವರ ಕೀರ್ತಿ ಪತಾಕೆಯನ್ನು ಎತ್ತಿ ಮಾಂಜ ಬರ್ಕೆಯಲ್ಲಿ ಹುಮ್ಮದ ಪಂಜುರ್ಲಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯುತ್ತದೆ‌.

೨೮.ಅಡ್ಡೂರ ದೇಬೆ ಎಂಬ ಸ್ತ್ರೀ ಶಕ್ತಿ.
ಅಡ್ಡೂರುದ ದೇರು ಬೈದ್ಯೆರ ಏಳು ಪ್ರಾಯದ ತಂಗಿ ದೇಭೆಯನ್ನು ಕಾರ್ನಾಡು ಉಲ್ಲೆರಗುತ್ತು ಕುತ್ತಿಪುಣ್ಕೆಯಲ್ಲಿ ಜುಮಾದಿಯ ಚಾಕ್ರಿ ಮಾಡುತ್ತಿದ್ದ ಸಿದ್ದು ಕುಂದಾಯರಿಗೆ ಮದುವೆ ಮಾಡಿ ಕೊಡುತ್ತಾರೆ.ಹಾಗೆಯೇ ತನ್ನ ತಂಗಿ ಸಣ್ಣವಳು ಹೋಗಿ ದೊಡ್ಡವಳಾಗಿ,ಅವಳಿಗೆ ಮಕ್ಕಳಾದರೆ ದೊಡ್ಡಬಜ್ಪೆಯ)(ಪೆರಿಯ ಬಜ್ಪೆ) ಉಲ್ಲಾಯನಿಗೆ ಹುಂಡಿ ಹಣ,ಚೆಂಡು ಹೂವು ಹರಕೆ ಒಪ್ಪಿಸುತ್ತೆನೆ ಎಂದು ದೇವು ಬೈದ್ಯರು ಹರಕೆ ಹೇಳುತ್ತಾರೆ. ಮುಂದೆ ಈ ಹರಕೆಯನ್ನು ದೇಭೆ ಹೋಗಿ ಒಪ್ಪಿಸುವಾಗ ಉಲ್ಲಾಯ ಅವಳ ಬೆನ್ನು ಹಿಡಿದು ಬಂದು,ಕಾರ್ನಾಡು ಧರ್ಮಸಾನದಲ್ಲಿ ನೆಲೆಯಾಗುತ್ತರೆ.ಹಾಗೆಯೇ ದೇಭೆಗು ಉಲ್ಲಾಯನ ಎಡದ ಭಾಗದಲ್ಲಿ ಆರಾಧನೆ ನಡೆಯುತ್ತದೆ.ಮತ್ತು ಬೇರೆ ಕಡೆಯೂ ದೇಭೆಗೆ ಆರಾಧನೆ ಇದೆ.
-More details : ಅಡ್ಡೂರ ದೇಬೆ - ಎಸಲ್ 1

೨೯.ಬೊಬ್ಬರ್ಯ ಮಾಯಕ ಮಾಡಿದ ಪೊಂಗದೇರೆ ಬೈದ್ಯ.ಮೂಳೂರಿನ ಪೊಂಗದೇರ ಬೈದ್ಯ ಒಂದು ದಿನ ಮೂರ್ತೆದಾರಿಕೆಗೆ ಬೇಕಾದ ಪೂರ್ವತಯಾರಿ ಕೆಲಸ ತಾಳೆ ಕೊಂಬಿನ ತುದಿಯನ್ನು ನುಣುಪು‌ ಮಾಡುತ್ತಿರುವಾಗ ಅಯ್ಯಂಗಲಕಲ್ಲಿನಲ್ಲಿ ಕುಳಿತಿದ್ದ ಬಬ್ಬರ್ಯ ತನ್ನ ಕಾರ್ನಿಕವನ್ನು ತೋರಿಸಿದ.ಎತ್ತರದ ತಾಳೆಮರವನ್ನು ನೆಲಕ್ಕೆ ಬಗ್ಗಿಸಿದ ಇನ್ನಷ್ಟು ಕೀಟಲೆಗಳನ್ನು ತೋರಿಸಿದ.ನಾನು ಇಂತಹ ಒಂದು ಶಕ್ತಿ ಎಂದು ಪೊಂಗದೇರ ಬೈದ್ಯನಿಗೆ ಹೇಳಿದ. ಕೊನೆಗೆ ಪೊಂಗದೇರ ಬೈದ್ಯನಿಗೆ ಒಳಿದು ನಿನಗೆ ಸೇಂದಿ ವೃದ್ದಿಯಾಗುತ್ತ ಹೋಗಲಿ,ನಿನ್ನ ಮನೆಯ ಸೇಂದಿಯ ಹಂಡೆ ಬರಿದಾಗದೇ ಇರಲಿ ಎಂದು ಅನುಗ್ರಹಿಸಿ ಮತ್ತು ಈ ವಿಚಾರವನ್ನು ಯಾರಲ್ಲೂ ಹೇಳಬೇಡ ಎಂಬ ಎಚ್ಚರಿಕೆಯನ್ನೂ ಕೊಟ್ಟ.ಅದರಂತೆಯೇ ಪೊಂಗದೇರ ಬೈದ್ಯರ ಮೂರ್ತೆದಾರಿಕೆ ಅಭಿವೃದ್ಧಿ ಕಂಡು ಮನೆಯಲ್ಲಿ ಸಿರಿ ಸಂಪತು ತುಂಬಿ ತುಳುಕಿತು.ಇದನ್ನು ನೋಡಿದ ಅವನ ಹೆಂಡತಿ ಇದರ ಮರ್ಮ ಏನು ಎಂದು ಗಂಡನನ್ನು ಪೀಡಿಸತೊಡಗಿದಳು.ಎಷ್ಟೋ ಭಾರಿ ಸುಳ್ಳು ಹೇಳಿ ತಪ್ಪಿಸಿಕೊಂಡ ಬೈದ್ಯರು ಕೊನೆಗೆ ಉಪಾಯವಿಲ್ಲದೇ ಹೆಂಡತಿಯಲ್ಲಿ ದೈವದ ವಿಚಾರವನ್ನು ಹೇಳಿ ದೈವ ದ್ರೊಹ ಮಾಡಿದರು ಮತ್ತು ವಚನಭ್ರಷ್ಟರಾದರು. ಮುನಿದ ದೈವ ಪೊಂಗದೇರ ಬೈದ್ಯನನ್ನು ಮೂರ್ತೆಗೆ ಬಂದಾಗ ತಾವರೆ ಕೊಳದಲ್ಲಿ ಮುಳುಗಿಸಿ ಏಳು ರಾತ್ರಿ,ಎಂಟು ಹಗಲಿನಲ್ಲಿ ಮಾಯ ಮಾಡಿತು.ಈ ಅಘಾತದಿನ ಕಂಗಾಲಾದ ಹೆಂಡತಿ ಪರಿವಾರದವರು ಸೇರಿ ಬಲ್ಯಾಯ ಬಲ್ಮೆಯಲ್ಲಿ ಕೇಳಿದಾಗ ಇದು ದೈವ ಬೊಬ್ಬರ್ಯನ ಕಾರ್ನಿಕ ಎಂದು ಹೇಳಿದಾಗ, ಎಲ್ಲಾರು ಸೇರಿ ಬೊಬ್ಬರ್ಯನಲ್ಲಿ ಪ್ರಾರ್ಥಿಸಿದಾಗ ತಾವರೆಕೊಳದಿಂದ ಪೊಂಗದೇರ ಬೈದ್ಯರು ಎದ್ದು ಬಂದರು.ಅನಂತರ ಪೊಂಗದೇರ ಬೈದ್ಯರ ಕೈಯಲ್ಲಿ ಮುಂಡ್ಯೆ ಹಾಕಿಸಿ ಬೊಬ್ಬರ್ಯನನ್ನು ನಂಬಿದರು.

೩೦.ಮೂಡಾಣ ಉಬಾರ ಕಡಪಿನಲ್ಲಿ ನೆಲೆಯಾದ ಕಲ್ಕುಡ ಕಲ್ಲುರ್ಟಿಯರು,ಪಡುವಣ ಭಾಗಕ್ಕೆ ಬಂದಾಗ ಬೊಳೂರು ಕಡಪಿನ ಪಾದೆದಿಲ್ಲು ಮನೆಯಲ್ಲಿ ಉಗಣ ಬೈದೆತಿ ಗೋಸಂಪಗೆಯ ಮರದಲ್ಲಿ ಕಲ್ಲು ಹಾಕಿ ಅರಾಧಿಸಿದಳು.

೩೧.ಅಂಬುಡೆಲಿಗೆ ಬಂದ ಪಟ್ಟದ ಪಂಜುರ್ಲಿ.
ಸುಳ್ಳಮಲೆಯ ಪಂಜುರ್ಲಿ ಅಜೀಲಮೊಗರು, ಕೂಟೆಲು ದಾಟಿ,ತಿಂಗಳಾಡಿ ಗುತ್ತಿಗೆ ಬರುತ್ತದೆ.ಅಲ್ಲಿಂದ ದಂಡು ದೇವು ಬೈದ್ಯರ ಕಾಲದಲ್ಲಿ ಅಂಬುಡೆಲು ಗುತ್ತುವಿಗೆ ಬಂದು ಅಲ್ಲಿನ ಕಪಿಲೆ ದನವನ್ನು ಮಾಯ ಮಾಡಿ ಕಾರ್ನಿಕ ತೋರಿ ಪಟ್ಟದ ಪಂಜುರ್ಲಿ ಎಂಬ ಹೆಸರು ಪಡೆಯುತ್ತದೆ.ಇಲ್ಲಿ ಎಲ್ಲಾ ರೀತಿಯ ಸಕಲ ಬಿರುದಾವಳಿಯಲ್ಲಿ ಬಲಿ ಭೋಗ ನಡೆಯುತ್ತದೆ.

೩೨.ಲೆಕ್ಕೆಸಿರಿಯ ಅನುಗ್ರಹದಿಂದ ದಂಡು ಜಯಿಸಿದ ಹೆಣ್ಣು ಸೇನಾದಿಪತಿ ಕೌಡೊಡಿಗುತ್ತು ಬೊಲ್ಲಕ್ಕು ಬೈದೆತಿ. ಅರುವದ ಅರಸರಿಗೂ,ನಂದಾವರದ ಅರಸರಿಗೆ ಯುದ್ದವಾಗುವ ಸಂಧರ್ಭದಲ್ಲಿ ಕೌಡೊಡಿ ಗುತ್ತಿಗೆ ಹೇಳಿಕೆ ಬರುತ್ತದೆ. ಅವಾಗ ಕಾರಣಂತಾರದಿಂದ ಮನೆಯ ಯಜಮಾನ ಯುದ್ದಕ್ಕೆ ಹೋಗುವ ಸನ್ನಿವೇಶದಲ್ಲಿ ಇರಲಿಲ್ಲ.ಅವಾಗ ಅ ಮನೆಯ ಹೆಣ್ಣುಮಗಳು ಯುದ್ದಕ್ಕೆ ಸಿದ್ದಳಾಗಿ ಕುದುರೆಯನ್ನೆರಿ ಹೊರಡುತ್ತಾಳೆ.ಹೋಗುವ ದಾರಿಯಲ್ಲಿ ಪಂಜಿಕಲ್ಲು ದಂಡೆಕೋಡಿಯ ಹತ್ತಿರ ಲೆಕ್ಕೆಸಿರಿ ದೈವದ ನೇಮ ಅಗಿ,ಅದರ ಅಣಿಯನ್ನು ಮರಕ್ಕೆ ಕಟ್ಟಿದ್ದರಂತೆ.ಅದನ್ನು ನೋಡಿ ನಾನು ಯುದ್ದದಲ್ಲಿ ಜಯಶಾಲಿಯಾಗಿ ಬಂದರೆ, ನಿನ್ನನ್ನು ಕೊಂಡೊಗಿ ನಂಬುತ್ತೆನೆ ಎಂದು ಮನದಲ್ಲಿ ಪ್ರಾರ್ಥಿಸಿ ಮುಂದುವರೆದಳಂತೆ. ಅದರಂತೆ ಪಾಣೆರುನಲ್ಲಿ ನಡೆದ ಯುದ್ದದಲ್ಲಿ ಜಯಶಾಲಿಯಾಗಿ ಬರುತ್ತಾರೆ.ಅರಸರಿಂದ ಉತ್ತರುಂಬಲಿ,ಮಾನಾದಿಗೆ,ಯುದ್ದದ ಖಡ್ಗ ಪಡೆಯುತ್ತಾರೆ. ಹಾಗೆಯೇ ಲೆಕ್ಕೆಸಿರಿ ದೈವವನ್ನು ಕೌಡೊಡಿ ಗುತ್ತಿನಲ್ಲಿ ನಂಬುತ್ತಾರೆ.

೩೩.ಬಡಗಣ ತುಳುನಾಡಿನಲ್ಲಿ ಮಲೆ ಸಾವಿರ ಎಂಬ ದೈವದ ಕಥೆ ಹೀಗಿದೆ.
ಅಂತಬೈದ್ಯ ಎಂಬವರು ಈಶ್ವರನ ದೊಡ್ಡ ಭಕ್ತನಾಗಿದ್ದ.ಮೂರ್ತೆದಾರಿಕೆ ಅಂತ ಬೈದ್ಯರ ಮೂಲ ಕಸುಬು ಅಗಿತ್ತು.ಹಾಗೆಯೇ ಈಶ್ವರನಿಗೆ ನಿತ್ಯ ಸೇಂದಿ ಒದಗಿಸುತ್ತಿದ್ದ. ಒಂದು ದಿನ ತಾಳೆಮರದಿಂದ ಬಿದ್ದು ಕಣ್ಣು ಕಾಣದೇ,ಕೈಕಾಲು ಬಾರದೇ ಈಶ್ವರನನ್ನು ನೆನೆದಾಗ ಅವನಿಗೆ ಮುಕ್ತಿ ಕೊಟ್ಟು ಇನ್ನು ಮುಂದೆ ಭೂ ಲೋಕದಲ್ಲಿ ಮಲೆಸಾವಿರ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯು ಎಂದು ಅನುಗ್ರಹ ಮಾಡಿದರು ಎಂಬ ಕಥೆಯಿದೆ.

೩೪.ಅಚು ಬೈದೆತಿಯ ಬೆನ್ನು ಬಿಡದೇ ಬಂದ ಮಲರಾಯ ದೈವ.
ಮಲಾರ ಬೀಡಿನಿಂದ ಪ್ರಸರಣ ಅಗುತ್ತ ಬಂದ ಮಲರಾಯ ದೈವವನ್ನು ಅಚು ಬೈದೆತಿಯು ತನ್ನ ಅರಮನೆಯಲ್ಲಿ ನಂಬುತ್ತಾಳೆ.ಕೊನೆಗೊಂದು ದಿನ ಅಚು ಬೈದೆತಿಯ ಊರು ಅರಮನೆ ಅಳಿಯಂತ್ರ ಆದಾಗ ಅಚು ಬೈದೆತಿ ದೇಶಾಂತ್ರ ಹೊರಟಾಗ ಅವಳ ಪಟ್ಟದ ದೈವ ಮಲರಾಯ ದೈವದ ಮೊಗವನ್ನು ಒಟ್ಟಿಗೆ ಸೆರಗಿನಲ್ಲಿ ಕಟ್ಟಿಕೊಂಡು ಬಂದು ಕೊನೆಗೆ ಕೊಪ್ಪರಿಗೆದ ಬಾಳೀಕೆಯ ಬೈರಿಕೊಳದಲ್ಲಿ ದೈವದ ಅಪ್ಪಣೆಯಂತೆ ನೆಲೆಯಾಗುತ್ತದೆ‌.

೩೫.ಬಾಣಂತಿ ಹೆಣ್ಣು,ದೈವದ ಕಾರ್ನಿಕದಿಂದ ದೈವ ಸ್ವರೂಪಿಯಾಗಿ ತುಳುನಾಡಿನಲ್ಲಿ ಆರಾಧನೆ ಪಡೆದ ಮಾಯಂದಲು.
ಪಾಂಗುಲ್ಲಾ ಬನ್ನಾಯ ಮತ್ತು ಅಲಿಬಾಲಿ ನಾಯ್ಗರ ಸ್ವಯ ಪ್ರತಿಷ್ಟೆಯಿಂದ ಕೊಲತ್ತಜುಮಾದಿಗೆ ದೂರು ಕೊಟ್ಟಾಗ, ಜುಮಾದಿಯೂ ಅಲಿಬಾಲಿ ನಾಯ್ಗರಿಗೆ ಬುದ್ದಿ ಕಳಿಸುವ ಸಲುವಾಗಿ,
ಒಂದು ದಿನ ಪಾಂಗುಲ್ಲ ಬನ್ನಾಯರ ವೇಷದಲ್ಲಿ ಅಲಿಬಾಲಿ ನಾಯ್ಗರ ಮನೆಗೆ ರಾತ್ರಿ ಹೊತ್ತಲ್ಲಿ ಬಂದ ಜುಮಾದಿಯೂ,ಅಲಿಬಾಲಿ ನಾಯ್ಗರ ಸೊಸೆ,ಹಸಿ ಬಾಣಂತಿಯಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗಲು ಬೆಳಕಿಗೆ ಮಡಲು ತೂಟೆ ಕೇಳಿತು.ಆದರೆ ಅವಳು ಮಡಲು ತೂಟೆಗೆ ಬೆಂಕಿ ನೀಡಲು ಮನೆಯ ಹೊರಗೆ ಬರಲು ಒಪ್ಪದೇ ಇದ್ದಾಗ ಮಾಯದ ಮಾತಿನಿಂದ ಪುಸಲಾಯಿಸಿ ಹೊರಗೆ ಕರೆಸಿಕೊಂಡು ಮಾಯ ಮಾಡಿತು.ಅಲ್ಲದೇ ಅವಳ ಮಗುವನ್ನು ಕಿಟಕಿಯಿಂದ ಹೊರಗೆ ಎಳೆಯಿತು.ಮುಂದಕ್ಕೆ ಇವಳು ಮಾಯಂದಾಲೆ ಎಂಬ ಹೆಸರಿನಿಂದ ತುಳುನಾಡಿನ ಗರಡಿಗಳಲ್ಲಿ,ಕೆಲವೊಂದು ಬಿಲ್ಲವ ಬರ್ಕೆಯ ಮನೆಗಳಲ್ಲಿ ಆರಾಧನೆ ಪಡೆಯುತ್ತಾಳೆ.

೩೬.ಬಾಕೀಲದ ಮಹಾ ಪುರುಷನಾಗಿ ಮೆರೆದ ಮಂತ್ರವಾದಿ ದೇರ ಬೈದ್ಯರು.ಮಹಾನ್ ಮಾಂತ್ರಿಕರಾಗಿ ಮೆರೆದ ಅನಂತಾಡಿ ಬಾಕೀಲ ಮನೆಯ ದೇರ ಬೈದ್ಯರನ್ನು ದೇರಾಜ್ಜೆ ಎಂದೂ ಕರೆಯುತ್ತಾರೆ.ಅಗೀನ ಕಾಲದಲ್ಲಿ ಜಪ ತಪ ಸಿದ್ದಿಸಿಕೊಂಡ ಬೈದ್ಯರಲ್ಲಿ ಇವರೂ ಒಬ್ಬರು.ಆದರೆ ಕೊನೆಯ ಕಾಲದಲ್ಲಿ
ಇವರನ್ನು ಕೆಲವರು ಕುತಂತ್ರ ಮಾಡಿ ಕೊಂದರು ಎಂಬ ಮಾತಿದೆ.ಅದಾಗ್ಯೂ ಸಾಯುವ ಹೊತ್ತಲ್ಲಿ ಇವರು ಅ ದ್ರೊಹಿಗಳನ್ನು ಬಿಡಲಿಲ್ಲ. ಮೂವರು ಘಾತಕರನ್ನು ತನ್ನ ಶಕ್ತಿ ಸಾಮರ್ಥ್ಯದಿಂದಲೇ ಮಂತ್ರ ಬರೆಯುವ ಕಂಠಕದಲ್ಲೆ ಚುಚ್ಚಿ ಕೊಂದಿದ್ದಾರೆ ಎಂಬ ಮಾತಿದೆ.
ಇಂದಿಗೂ ಇವರಿಗೆ ಅ ಮನೆಯಲ್ಲಿ ಗುರುಪೀಠ ಮತ್ತು ಆರಾಧನೆ ಇದೆ.

೩೭.ಅನಾದಿಕಾಲದಿಂದಲೂ ದೇಸಿಲ ಸೀಮೆ ದೇವೆರೆ ಮಾಗಣೆ ಎಂದು ಕರೆಯುವ ಶಿಶಿಲದ ಮಣ್ಣಿನ ಒಟ್ಲದ ಮೂಲ ವ್ಯಕ್ತಿ,ಕಾಂಜ ಬೈದ್ಯರು ಒಟ್ಲದ ಕಯದಲ್ಲಿ ಅಡಿಯಾರ ಮುಳುಗಿ,ಮೇಲಾರ ಏಳುವಾಗ ಬಡಗಣ ದಿಕ್ಕಿನಲ್ಲಿ ಬೊಲ್ಲಿಯಷ್ಟು ಬೆಳಕು ಕಾಣುತ್ತದೆ.ಇದನ್ನು ಕಂಡು ಅಶ್ಚರ್ಯಚಕಿತರಾದ ಕಾಂಜ ಬೈದ್ಯರು ಇದೇನು ಸೊಗ ಮಾಯ ಅಂತ ಹೇಳಿ, ಅಂತಹ ಒಂದು ದೈವ ಆಗಿದ್ದರೆ ನಮ್ಮ ಮನೆಯ ಧರ್ಮದ ಆಧಾರ ಹಿಡಿದು ಬರಬೇಕು ಎಂದು ಹೇಳುತ್ತಾರೆ. ಅವಾಗ ದೈವವು ನಿಮ್ಮೊಂದಿಗೆ ಬರುತ್ತೆನೆ,ನಿಮ್ಮ ಬೀಡಲ್ಲಿ ಧರ್ಮ ಹಿಡಿಸಿ, ಧರ್ಮ ಅರಸು ಉಲ್ಲಾಯ ಎಂದು ಹೇಳಿಸುವೆ ಎಂದು ಒಟ್ಲದಲ್ಲಿ ಧರ್ಮರಸು ಉಲ್ಲಾಯ ದೈವ ನೆಲೆಗೊಂಡಿತು.

೩೮.ಅಂತಯ್ಯ ಬೈದ್ಯ ಎಂಬತರು ಶಿರ್ವದ ಜೈನರ ಗೇಣಿ ಜಾಗದಲ್ಲಿ ಬೇಸಾಯ ಮಾಡುತ್ತಿದ್ದರು. ಮೇಲಾಗಿ ಅವರೊಬ್ಬ ಮಂತ್ರವಾದಿ ಆಗಿದ್ದರು.ಒಂದು ವರ್ಷ ಬೇಸಾಯ ಬೆಳೆಯೆಲ್ಲಾ ನಾಶ ಮತ್ತು ನಷ್ಟವಾಗಿ ಗೇಣಿ ಕೊಡಲು ಕಷ್ಟ ಆದಾಗ ತನ್ನ ಮಂತ್ರದ ಕೋಲಿನ ಶಕ್ತಿಯಿಂದ‌ ನೀರಿನ ಮುಡಿ ಮಾಡಿ ಗೇಣಿ ಕೊಟ್ಟರು.ಮುಡಿಗೆ ಸುರ್ಜಿ ಹಾಕಿ ನೋಡುವಾಗ ಅದು ನೀರಿನಿಂದ ಮಾಡಿದ ಮುಡಿ ಎಂದು ಗೊತ್ತಾಗಿ,ಅವರ ಮೇಲೆ ಕಿನ್ಯಡ್ಕ ಜುಮಾದಿಯಲ್ಲಿ ದೂರು ಕೊಟ್ಟರು.ಜುಮಾದಿಯೂ ಅವರನ್ನು ಮಾಯಕ ಮಾಡಿ ಶಿರ್ವದ ಹೊಳೆಯಲ್ಲಿ ಅವರನ್ನು ನೀರಾಗಿ ಬಿಟ್ಟಿತು.ಅವರ ಮಂತ್ರ ತಂತ್ರಗಳ ಚೀಲವೂ ನೀರಿನಲ್ಲಿ ತೇಲಾತೊಡಗಿತು.
ಅವರು ತನ್ನ ಅಣ್ಣಂದಿರಿಗೆ ಕನಸು ಸ್ವಪ್ನದಲ್ಲಿ ಕಾಣಿಸಿಕೊಂಡು ತನಗೆ ತಂಬಡ ಬಾಕ್ಯರುನಲ್ಲಿ ದೂಪೆ ಕಟ್ಟುವಂತೆ ಹೇಳುತ್ತಾರೆ.ಮುಂದೆ ಅವರಿಗೆ ಅಲ್ಲಿ ಆರಾಧನೆ ನಡೆಯಿತು.
ಈಗಲೂ ಕಟ್ಟಿಂಗೆರಿಯ ತಂಬಡ ಬಾಕ್ಯರಲ್ಲಿ ಈ ದೂಪೆ ಇದೆ.

೩೯.ಅತ್ತಾವರ ಸಾರಲಾ ಪಟ್ಟಕ್ಕೆ ದಿಟ್ಟಿ ಇಟ್ಟ ವೈದ್ಯನಾಥ (ಮುಂಡದಾಯ) ದೈವ ಕಂಬಳದ ಕೋಣಗಳನ್ನು,ಹಾಲು ಕರೆಯುವ ಎಮ್ಮೆಗಳನ್ನು ಈಗಿನ ಎಮ್ಮೆಕೆರೆಯಲ್ಲಿ ಮಾಯ ಮಾಡಿತು. ಏಳುರಾತ್ರಿ ಎಂಟು ಹಗಲು ಹುಡುಕಿದರೂ ಮಾಯ ಆದ ಹನ್ನೆರಡು ಜತೆ ಜಾನುವಾರುಗಳು ಸಿಗದೇ ಇದ್ದಾಗ,ಪೆರ್ಗಡೆ ಬೊಟ್ಟು ಬಲ್ಲಾಳರು ಸಾರಿ ಬಲ್ಮೆ ಇಟ್ಟು ಕೇಳಿದಾಗ ಮುಂಡತಾಯ(ವೈದ್ಯನಾಥ) ದೈವ ಬಂದಿದೆ.ಅದನ್ನು ತಾವುಗಳು ಆರಾಧಿಸಬೇಕು ಎಂದು ಹೇಳುತ್ತಾರೆ.ಆ ರೀತಿ ಅರಾಧಿಸಿದ ಅತ್ತಾವರ ವೈದ್ಯನಾಥನ ಮದಿಪು,ಚಾಕಿರಿ ಎಲ್ಲಾವೂ ಮೂಲದಲ್ಲಿ ದೈವದ‌ಮುಗ ಸಿಕ್ಕಿದ ಭಂಡಾರದ ಮನೆ ತಿಮ್ಮ ಬೈದ್ಯರ ಸಂಸಾರಕ್ಕೆ ಅನಾದಿಕಾಲದಿಂದಲೂ ಒದಗಿಬಂದಿದೆ.

೪೦.ಕಾರ್ಕಳದ ಅರಸರ ಮಂತ್ರಿ ಮತ್ತು ದಳವಾಯಿಯಾಗಿದ್ದ ಬೈಲಡ್ಕ ಬೀಡಿನವರಾದ ಬಿರುವ ರಾಮ ನಾಯಗರು ಮತ್ತು ಅವರ ಸಹೋದರರು ಬಂಗಾಡಿ ಅರಸರ ದಂಡನ್ನು ಸೋಲಿಸಿ, ಹಿಂದಿರುಗಿ ಬರುವಾಗ ಅರಮನೆಯ ಕಲ್ಲುರ್ಟಿ ದೈವವು ಗಡಾಯಿಕಲ್ಲಿನಲ್ಲಿ ಇವರಿಗೆ ಎದುರುಗೊಂಡಿತು. ರಾಮನಾಯಗ ಮತ್ತು ಸಹೋದರರ ಧರ್ಮ ಮತ್ತು ಭಕ್ತಿಗೆ ಮೆಚ್ಚಿ ಬೈಲಡ್ಕ ಬೂಡಿಗೆ ಬಂದು ನೆಲೆಯಾಯಿತು. ಮಂದೆ ಬೂಡಿನ ಸ್ತ್ರೀ ಸಿರಿಗಳ ಮಾನ ಪ್ರಾಣ ಉಳಿಸಿ ವರ್ತೆ ಎಂಬ ಹೆಸರು ಪಡೆಯಿತು ಎಂಬ ಪ್ರತೀತಿ ಇದೆ.

೪೧.ಮೂಲ್ಕಿ ಮಾಗಣೆಯಲ್ಲಿ ಕಾಂತಾಬಾರೆ ಬೂದಬಾರೆಯರೆಂಬ ಇಬ್ಬರು ಭಾರಿ ಬಲಿಷ್ಟ ಅವಳಿ ಸಹೋದರ ಬೈದ್ಯರು ಕೋಟಿ ಚೆನ್ನಯ್ಯರಂತೆ ಬಲಿಷ್ಠರಾಗಿದ್ದರು.ಮೂಲ್ಕಿ ಒಂಭತ್ತು ಮಾಗಣೆಯ ದಳವಾಯಿಗಳಾದ ಇವರು ಉಳೆಪಾಡಿ ಕೊಲ್ಲೂರು ಬರ್ಕೆಯ(ಗುಡ್ಡೆಸಾನ) ಕುಂದಬಾರೆ ಮತ್ತು ಅಚಿ ಬೈದೆತಿ ದಂಪತಿಗಳಿಗೆ ಹುಟ್ಟಿದ ಅವಳಿ ವೀರರು.ಕೋಟಿ ಚೆನ್ನಯರಂತೆ ಮೂಲ್ಕಿಯ ಒಂಬತ್ತು ಮಾಗಣೆಯ ಗರಡಿಯಲ್ಲಿ ಮಾತ್ರ ಅರಾಧನೆ ಪಡೆದ ಬಿಲ್ಲವ ವೀರರು.

ಹಾಗು ಬ್ರಹ್ಮಮುಗೇರರ ಕಥೆಯಲ್ಲಿ ಬರುವ ಬೈದ್ಯರ ಕಥೆಯನ್ನು ಇನ್ನೊಮ್ಮೆ ಸವಿಸ್ತಾರವಾಗಿ ಬರೆಯುತ್ತೆನೆ.(ಅಲ್ಲದೇ ಬಡಗಣ ಉಡುಪಿ ಭಾಗದ)

ಷ್ಟು ಮಾತ್ರವಲ್ಲದೇ ಇನ್ನೂ
ಕುತ್ಯಾರು ಕೇಂಜದ ಬಗ್ಗ ತೋಟದ ಮೈಂದ ಬೈದ್ಯರು
ಪಡ್ರೆ ಜುಮಾದಿ ಒಲಿದು ನಂಬಿದ ಬಡಂಗ ಬೈದ್ಯರು
ಅತಿಕಾರಿಬೆಟ್ಟು ಮುಲ್ಕಿ ಬಜ್ಜಯಿ ದುಗ್ಗ ಬೈದ್ಯರು,
ಬಬ್ಬುಸ್ವಾಮಿಗೆ ಅಸರು ಕೊಟ್ಟ ಕುಂಜಿ ಬೈದೆತಿ ಇನ್ನೂ ಹಲವಾರು ಜನ ಬೈದ್ಯರ ಹೆಸರುಗಳು ತುಳುನಾಡಿನ ದೈವಗಳ ಸಂಧಿ ಪಾರ್ಧನದಲ್ಲಿ ನಮಗೆ ಕೇಳುವುದಕ್ಕೆ ಸಿಗುತ್ತದೆ.ಇದರಿಂದ ನಮಗೆ ತಿಳಿಯುವ ವಿಷಯವೆಂದರೆ ಬೈದ್ಯರು ಅದಿಕಾಲದಿಂದಲೂ ಇಲ್ಲಿನ ಮಣ್ಣಿನ ಮೂಲ ಮಕ್ಕಳಾಗಿ ದೈವರಾಧನೆಯ ಒಂದು ಮುಖ್ಯ ಕೊಂಡಿಯಾಗಿ ಕಾಣಸಿಗುತ್ತಾರೆ.

ಬರವು: ಚಂದು

Share this post

Recent Posts:

Share this post

Facebook Twitter Whatsapp Linkedin