ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ

Enmoora Kramadalli Aguttiruva Baidergala Nema

Post date: 2021-06-18
ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ
Avatar

Shailu Birva Agattadi Dola Baarike

ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

ಬಾಕಿಲ ಗುತ್ತು


Recent Posts:

Share this post

ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ

ಪ್ರಪಂಚದಲ್ಲಿ ಎಲ್ಲಿ ಹೋದರು ಸಿಗದ ಅಧ್ಬುತವಾದ ಭೂತಾರಾಧನೆ ತುಳುನಾಡಿನಲ್ಲಿ ಮಾತ್ರ ನಮಗೆ ಸಿಗಲು ಸಾಧ್ಯ. ತುಳುನಾಡು ಎನ್ನುವುದು ಸಾವಿರ ದೈವಗಳ ಆರಾಧನ ಪ್ರದೇಶ. ಎಲ್ಲಾ ಜಾತಿ ಬಾಂಧವರು ಒಟ್ಟಾಗಿ ಸೇರಿ ಮಾಡುವ ಆರಾಧನೆಯಂತ ಇದ್ದರೆ ಅದು ಭೂತಾರಾಧನೆ ಮಾತ್ರ. ದೈವದ ಕೊಡಿಯಡಿಯಲ್ಲಿ ಎಲ್ಲರು ಅವರಿಗೆ ಕೇವಲ ಭಕ್ತರು ಮಾತ್ರ. ಇದು ಜಾತಿಯನ್ನು ಮೀರಿ ಬೆಳೆದ ಆರಾಧನೆ.

ಕೇವಲ ತುಳುನಾಡು ಮತ್ತು ಕೆಲವು ಆಸುಪಾಸಿನ ಪ್ರದೇಶಗಳಲ್ಲಿದ್ದ ಭೂತಾರಾಧನೆ ಇಂದು ಮಾಯನಗರಿಯಾದ ಮುಂಬೈಯು ಕಾಲಿಟ್ಟಿದೆ ಎಂದಾದರೆ ಅದು ದೈವಗಳ ಕಾರಣೀಕವೆ ಸೈ. ಅಂತಹ ಭೂತಾರಾದನೆಯಲ್ಲಿ ಗರಡಿ ಆರಾಧನೆಯು ತನ್ನದೇ ರೀತಿಯ ಛಾಪನ್ನು ಒತ್ತಿದೆ. 66 ಗರಡಿ 33 ತಾವು ಎನ್ನುವ ಮಾತಿದ್ದರು ಇಂದಿಗೆ ಸುಮಾರು ಅಂದಾಜು 265 ಗರಡಿಗಳು ಇವೆ ಎನ್ನುವ ಮಾತಿದೆ. ಗರಡಿ ಆರಾಧನೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಬಿನ್ನತೆಯಿದ್ದರು ನೇತ್ರಾವತಿ ನದಿಯ ಒಳಗಿರುವ ಗರಡಿಗಳು ಒಂದೇ ರೀತಿಯ ಕ್ರಮದಲ್ಲಿ ನೇಮವನ್ನು ನಡೆಸುತ್ತಿದೆ.

ನೇ ಎನ್ನುವುದು ನಿಯಮ ಪ್ರಕಾರ ಆಗುವಂತಹುದು. ಎಲ್ಲಾ ದೈವಗಳ ನರ್ತನ ಸೇವೆಯನ್ನು ನೇಮ ಎಂದು ಕರೆಯುವ ವಾಡಿಕೆ ಇಲ್ಲ. ಕೆಲವೊಂದು ದೈವಗಳ ನರ್ತನ ಸೇವೆಯನ್ನು ನೇಮ ಎಂದು ಕರೆಯುವುದು ವಾಡಿಕೆ. ಅವುಗಳಲ್ಲಿ ಅಗ್ರಪಂಕ್ತಿಯಲ್ಲಿ ಇರುವುದು ಬೈದೇರುಗಳ ನೇಮ. ಎಣ್ಮೂರ ದೇವಣ್ಣ ಬಲ್ಲಾಳರು ಅನಾದಿಯಲ್ಲಿ ಮಾಡಿದ ಕ್ರಮದ ಪ್ರಕಾರ ಇಂದಿಗೂ ಕೂಡ ನೇತ್ರಾವತಿ ಹೊಳೆಯ ಒಳಗಿರುವ ಗರಡಿಗಳು ಚಾಚು ತಪ್ಪದೆ ಅದೇ ಕ್ರಮದಲ್ಲಿ ಎಣ್ಮೂರ ದೇವು ಬಲ್ಲಾಳೆರ್ ಮಂತಿ ಕಟ್ಟ್ ಅಂತ ಹೇಳುತ್ತಾ ನೇಮವನ್ನು ಮಾಡಿಸುತ್ತಿದ್ದಾರೆ. ಅದೆಷ್ಟೂ ವರ್ಷಗಳು ಸಂದರೂ ಕೂಡ ಇವತ್ತಿಗೂ ಅದೇ ಕ್ರಮದಲ್ಲಿ ಆಗುತ್ತಿದೆ.

ಟ್ಟಲೆ ಆಯಾಯ ಗರಡಿಗಳಲ್ಲಿ ವಿಭಿನ್ನವಾಗಿದ್ದರೂ‌ ಕೂಡ ಕಟ್ಟ್ ಬದಲಾಗಿಲ್ಲ. ನೇಮಕ್ಕೆ ದಿನ ಇಟ್ಟ 7 ದಿನಗಳ ಮುಂಚೆ ಗೊನೆ ಮುಹೂರ್ತವಾಗುತ್ತದೆ. ಇಲ್ಲಿ 33 ಸ್ವಸ್ತಿಕ ಇಟ್ಟು ತಂಬಿಲ ಶುದ್ದ ಹೋಮ ನಡೆದು ಕಂಚಿಕಲ್ಲಿಗೆ ಕಾಯಿ ಹೊಡೆಯುವ ಕ್ರಮವಿದೆ. ನಂತರ ನೇಮದ ಕಟ್ಲೆ ಬೈದೇರುಗಳ ಕಿರುಬಾಳು ಭಂಡಾರ ತೆಗೆಯುವುದರಿಂದ ಪ್ರಾರಂಭವಾಗುತ್ತದೆ. ಕೆಲವು ಕಡೆಗಳಲ್ಲಿ ಗರಡಿಯಲ್ಲೆ ಭಂಡಾರ ಇದ್ದರೆ ಕೆಲವು ಕಡೆಗಳಲ್ಲಿ ತಾವು ಚಾವಡಿಯಲ್ಲಿ ಅಥವ ಮನೆಯ ಒಳಗಿನಿಂದ ದರ್ಶನ ಪಾತ್ರಿಗಳು ಹುಟ್ಟುಕಟ್ಟನ್ನು ಹೇಳಿ ಆವೇಶ ಭರಿತರಾಗಿ ಭಂಡಾರ ಹೊರಟು ಗರಡಿಗೆ ಪ್ರವೇಶವಾಗುತ್ತದೆ. ನಂತರ ನೇಮ ಕಟ್ಟುವ ಪರವ ಸಮುದಾಯವರಿಗೆ ಎಣ್ಣೆ ಬೂಲ್ಯ ನೀಡಲಾಗುತ್ತದೆ. (ಕೊಡಿ ತಿಂಗಳ ಮತ್ತು ಸೋನದ ಕೋಲದಲ್ಲಿ ಪಂಬದ ಸಮುದಾಯವರು ಬೈದೇರುಗಳಿಗೆ ಕೋಲ ಕಟ್ಟುತ್ತಾರೆ) ತದನಂತರ ನೇಮ ಕಟ್ಟುವವರು ಭತ್ತದಿಂದ ಬೈದೇರುಗಳ ಪ್ರತಿ ರೂಪವನ್ನು ಕೋಟಿ ಚೆನ್ನಯರ ಸಂಧಿಯನ್ನು ಹೇಳುತ್ತಾ ಬಿಡಿಸುತ್ತಾರೆ. ನಂತರ ಬೈದೇರುಗಳ ಪಾತ್ರಿಗಳು ಮತ್ತು ಸಹಾಯಕರು ಸೇರಿ ಭತ್ತದ ಪ್ರತಿ ರೂಪದ ಮೇಲೆ ಮಾವಿನ ಎಲೆ ಇಟ್ಟು ಅದರ ಮೇಲೆ ಬಾಳೆಯ ದಿಂಡಿನ ಸಿಪ್ಪೆಯಿಂದ ಗರಿಯವನ್ನು(ಸಾಮ) ಕಟ್ಟುತ್ತಾರೆ. ಆಮೇಲೆ ಶುಚಿರ್ಭೂತರಾದ ನೇಮ ಕಟ್ಟುವ ಪಾತ್ರಿಗಳು ಚೆಂಡಿನ ಬೂಲ್ಯವನ್ನು ಪಡೆದುಕೊಂಡು ಸಿಂಗಾರ ಮಾಡಿಸಿಕೊಳ್ಳಲು ಕೂರುತ್ತಾರೆ. ಆ ಸಮಯದಲ್ಲಿ ಗರಡಿಯ ಒಳಗೆ ಪಾತ್ರಿಗಳು ಹೋಮ ಇಟ್ಟು 66 ಸ್ವಸ್ತಿಕ ಸಿಂಗದನದಲ್ಲಿ ಬಡಿಸುತ್ತಾರೆ. ಅರದಾಳ ಮುಗಿಸಿದ ನೇಮ ಕಟ್ಟುವ ಪಾತ್ರಿಗಳು ಗರಡಿಯ ಒಳಗೆ ಬರುತ್ತಾರೆ. ಆ ಸಮಯದಲ್ಲಿ ಕೋಟಿ ಪಾತ್ರಿಯು ಗರಿಯದ ( ಬರಿಯ) ಮಧ್ಯದಲ್ಲಿ ಕೂತು ಹೋಮ (ಸೋಮ) ಇಡುತ್ತಾರೆ. ಅಷ್ಟು ಹೊತ್ತಿಗೆ ನೇಮ ಕಟ್ಟುವ ಪಾತ್ರಿಗಳು ಬೈದೇರುಗಳ ಹುಟ್ಟು ಕಟ್ಟುನ್ನು ರಾಗವಾಗಿ ಹಾಡುತ್ತಾರೆ. ನಂತರ ಗಿಂಡೆ ನೀರಿನಿಂದ ಶುದ್ದ ಮಾಡಿಸಿಕೊಳ್ಳುತ್ತಾರೆ. ನಂತರ ಗರಡಿಯ ಮುಖ್ಯಸ್ಥ ಅಥವ ಸಂಬಂಧಪಟ್ಟವರು ಮೂರು ಸಲ ಪಾರಿಯನ್ನು ಹೇಳುತ್ತಾರೆ. ಅವೇಶ ಬರಿಸಿಕೊಂಡ ಪಾತ್ರಿಗಳು ಮೀಸೆ ಧರಿಸದೆ ಗರಡಿ ಇಳಿದು ಸಂಬಂಧ ಪಟ್ಟವರಿಗೆ, ಗರಡಿ ಮನೆತನದವರಿಗೆ ಜೀಟಿಗೆ ಹಿಡಿದು ಅಭಯ ನೀಡುತ್ತಾರೆ. ತದನಂತರ ಬೆರ್ಮರ ಗುಂಡದ ಬಳಿ ಹೋಗಿ ತೆಂಗಿನಕಾಯಿ ಕಾಣಿಕೆಯನ್ನು ಇಡುತ್ತಾರೆ. ಅದನ್ನು ಕುಟುಂಬದ ಯಜಮಾನ ಹಿಡಿದುಕೊಂಡು ಬಂದು ಮನೆಯೊಳಗೆ ಇಡುತ್ತಾನೆ. ನಂತರ ಬೈದೇರುಗಳು ರಂಗಸ್ಥಳ ಪ್ರವೇಶ ಮಾಡುತ್ತಾರೆ. ಅಲ್ಲಿ ನರ್ತನ ಸೇವೆಯನ್ನು ಮಾಡಿ ನಂತರ ಗರಡಿ ಪ್ರವೇಶ ಮಾಡಿ ಮೀಸೆ ಧರಿಸಿ ಗರಡಿ ಇಳಿಯುತ್ತಾರೆ. ಆ ಸಮಯದಲ್ಲಿ ಗರಡಿ ಪಾತ್ರಿಗಳು ಸಹಾಯಕರು ಕೈ ಕೈ ಹಿಡಿದುಕೊಂಡು ಬೈದೇರುಗಳಿಗೆ ಮುಖ ಮಾಡಿ ಚಲಿಸುತ್ತಾರೆ. ಅವರ ಮುಂದಿನಿಂದ ಬೈದೇರುಗಳು ಕುಣಿಯುತ್ತಾ ತಮ್ಮ ಕೈಯಲ್ಲಿದ್ದ ಚವಳದಿಂದ ಆಶೀರ್ವಾದ ಮಾಡುತ್ತಾ ಬರುತ್ತಾರೆ. ರಂಗಸ್ಥಳಕ್ಕೆ ಬಂದಾಗ ಕೈಯನ್ನು ಬೈದೇರುಗಳ ಚಪ್ಪರಕೊಂಬು ಮುಟ್ಟಿ ನಮಸ್ಕರಿಸಿ ಪಾತ್ರಿಗಳು ಗರಡಿಯ ಹತ್ತಿರ ಹೋಗುತ್ತಾರೆ. ಬೈದೇರುಗಳು ರಂಗಸ್ಥಳದಲ್ಲಿ ನರ್ತನ ಸೇವೆ ನೀಡುತ್ತಾರೆ. ಆ ಸಮಯದಲ್ಲಿ ದರ್ಶನ ಪಾತ್ರಿಗಳು ಅವೇಶ ಭರಿತರಾಗಿ ಸುರಿಯ ಹಿಡಿದು ಗರಡಿ ಇಳಿದು ಗರಡಿ ಮುಂದೆ ಇರುವ ಲೋವೆ ಕಂಬ ಅಥವ ರಂಗಸ್ಥಳದ ಬಳಿಯಿರುವ ಲೋವೆ ಕಂಬದ ಅಡಿಗೆ ಬರುತ್ತಾರೆ. ಆ ಸಮಯದಲ್ಲಿ ದರ್ಶನ ಪಾತ್ರಿಗಳು ನೇಮದ ಪಾತ್ರಿಗಳು ಎದುರು ಬದಿರಾಗಿ ಚಲಿಸಿಕೊಂಡು ಸುರಿಯನ್ನು ನೇಮದ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ. ನಂತರ ಬೈದೇರುಗಳು ಸುರಿಯ ನರ್ತನ ಮತ್ತು ಗರಡಿ ಸಾಧಗದ ಪಟುಗಳನ್ನು ನೆರೆದಿರುವ ಭಕ್ತ ಸಮುದಾಯಕ್ಕೆ ತೋರಿಸುತ್ತಾರೆ.

ನಂತರ ಮಾಣಿಬಾಲೆ(ಮಾಯಂದಾಲ್) ಅಲಂಕಾರಗೊಂಡು ಕೈಯಲ್ಲಿ ಅಕ್ಕಿ ತೆಂಗಿನಕಾಯಿ ಹಿಂಗಾರ ಮತ್ತು ಅರ್ಧ ತೆಂಗಿನಕಾಯಿಯ ತುಂಡಿನಲ್ಲಿ ಉರಿಯುವ ದೀಪ ಹಾಗೂ ಗೆಜ್ಜೆಕತ್ತಿ ಇರುವ ಹರಿವಾಣವನ್ನು ಹಿಡಿದುಕೊಂಡು ಇಳಿಯುತ್ತಾರೆ. ಆಕೆ ಬಾಣಂತಿ ತಾಯಿಯಾಗಿರುವುದರಿಂದ ಅಲ್ಲಲ್ಲಿ ತಲೆಸುತ್ತಿ ಬೀಳುವ ಕ್ರಮವಿದೆ. ಆಗ ಗಿಂಡೆಯ ಪಾತ್ರಿ ಆಕೆಗೆ ಗಿಂಡೆ ನೀರನ್ನು ಪ್ರೋಕ್ಷಣೆ ಮಾಡುತ್ತಾ ಇರುತ್ತಾರೆ. ಗರಡಿ ಇಳಿದು ರಂಗಸ್ಥಳದ ಲೋವೆ ಕಂಬದ ಹತ್ತಿರ ಬಂದಾಗ ಆಕೆಯ ಅಣ್ಣಂದಿರಾದ ಕೋಟಿ ಚೆನ್ನಯರು ಬಂದು ಆಕೆಯನ್ನು ಇದಿರುಗೊಂಡು ಅಲ್ಲಿ ನರ್ತನ ಸೇವೆಯನ್ನು ನೀಡಿ ಅಣ್ಣಂದಿರ ಆಶೀರ್ವಾದ ಪಡೆದು ನೆರೆದ ಭಕ್ತರಿಗೆ ಮಾಯಂದಾಲ್ ಪ್ರಸಾದ ವಿತರಣೆ ಮಾಡುತ್ತಾಳೆ. ನಂತರ ಗರಡಿ ಪ್ರವೇಶ ಮಾಡಿ ಕಾಯ ಬಿಟ್ಟು ಮಾಯ ಸೇರುತ್ತಾಳೆ.ಬೈದೇರುಗಳು ರಂಗಸ್ಥಳದಲ್ಲಿ ದೇಯಿ ಬೈದೆತಿಯ ನಡೆಯನ್ನು ಹೇಳುತ್ತಾರೆ. ಆ ನಂತರ ಬುದ್ಯಂತನನ್ನು ಜಯಿಸುವ ಅಣುಕನ್ನು ತೋರಿಸುತ್ತಾರೆ. ಆ ನಂತರ ಸುರಿಯವನ್ನು ದರ್ಶನ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ.

ಸೂರ್ಯೋದಯ ಆಗುವ ಮುಂಚೆ ದರ್ಶನ ಪಾತ್ರಿಗಳು ಎಡೆಕಟ್ಟು (ಚೆಂಡು ಹಾಕಿಕೊಳ್ಳುವುದು) ಸಂದಾಯ ಮಾಡಿಕೊಂಡು ಸುರಿಯವನ್ನು ನೇಮದ ಪಾತ್ರಿಗಳಿಗೆ ಹಸ್ತಾಂತರ ಮಾಡುತ್ತಾರೆ. ಆ ನಂತರ ಕೋಟಿ ಚೆನ್ನಯರು ಕೈಯಲ್ಲಿ ಹಿಂಗಾರ ಹಿಡಿದುಕೊಂಡು ಮತ್ತು ಕುಜುಂಬ ಕಾಂಜವರು ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಕುಜುಂಬ ಕಾಂಜವರ ಹುಟುಕಟ್ಟನ್ನು ಹೇಳಿ ಗರಡಿಯ ಒಳಗೆ ಹೋಗಿ ಗರಿಯದ ಮುಂದೆ ಕಾಣಿಕೆಯನ್ನು ಇಡುತ್ತಾರೆ. ತದನಂತರ ನೇಮದಲ್ಲಿ ಬೈದೇರುಗಳು ಎದೆಕಟ್ಟು ಸಂದಾಯ ಮಾಡಿ ಕೊಳ್ಳುತ್ತಾರೆ. ಆ ನಂತರ ಬೈದೇರುಗಳು ರಂಗಸ್ಥಳದ ಅಲಂಕಾರವನ್ನು ಎಳೆದು ತೆಗೆಯುತ್ತಾರೆ. ಇದು ಅವರು ತಮ್ಮ ಅಂತ್ಯವನ್ನು ಸೂಚಿಸುವ ಕ್ರಮವಾಗಿದೆ. ನಂತರ ಪಟ್ಟಾವು ಇಳಿಯುವ ಕ್ರಮ ಮಾಡುತ್ತಾರೆ. ತಮ್ಮ ಹುಟ್ಟುಕಟ್ಟುನ್ನು ರಾಗಬದ್ದವಾಗಿ ಹಾಡುತ್ತಾರೆ. ಆ ಸಮಯದಲ್ಲಿ ಗಿಂಡೆ ಪಾತ್ರಿಯು ಬೈದೇರುಗಳು ಹೇಳುವ ಸಂಧಿ ಪ್ರಕಾರ ನೆಲಕ್ಕೆ ನೀರನ್ನು ಪ್ರೊಕ್ಷಣೆ ಮಾಡುತ್ತಾರೆ. ನಂತರ ರಂಗಸ್ಥಳ ಬಿಟ್ಟು ಬೈದೇರುಗಳು ಗರಡಿ ಮನೆ ಅಥವ ಧರ್ಮ ಚಾವಡಿಗೆ ಹೋಗಿ ತುಳಸಿ ಕಟ್ಟೆಗೆ ತಮ್ಮ ಸುರಿಯದಿಂದ ಭತ್ತವನ್ನು ಹಾಕಿ ನಂತರ ಗಿಂಡೆ ಹಾಲು ಮತ್ತು ಬಾಳೆಹಣ್ಣು ಸ್ವೀಕಾರ ಮಾಡುತ್ತಾರೆ. ನಂತರ ಹಾಲು ಕುಡಿದ ಮನೆ ಮತ್ತು ಚಾವಡಿಗೆ ಅಕ್ಕಿ ಹಾಕಿ ಗರಡಿಯ ಹತ್ತಿರ ಬಂದು ಎಲ್ಲರಿಗೂ ಗಂಧ ಪ್ರಸಾದ ನೀಡಿ ಕಂಚಿಕಲ್ಲಿಗೆ ಕಾಯಿ ಹೊಡೆದು ಅಭಯ ನೀಡಿ ಗರಡಿ ಪ್ರವೇಶ ಮಾಡಿ ಯಜಮಾನನಿಗೆ ಕಟ್ಟೊತ್ತರ ಬೂಲ್ಯ ನೀಡಿ ಗಿಂಡೆಗೆ ಅಕ್ಕಿ ಹಾಕಿ ಗಿಂಡೆಯ ಅಭಯ ನೀಡಿ ಗರಿಯಕ್ಕೆ ಸುರಿಯ ಊರಿ ಕಾಯ ಬಿಟ್ಟು ಮಾಯ ಸೇರುತ್ತಾರೆ. ಆ ಸಮಯದಲ್ಲಿ ನರ್ತನ ಪಾತ್ರಿಗಳ ಹಣೆಗೆ ನಾಣ್ಯವನ್ನು ಅಂಟಿಸುವ ಕ್ರಮವಿದೆ. ತದನಂತರ ಗರಿಯದ ಮೇಲಿರುವ ಚಕ್ರಂದ ಬಲಿಯನ್ನು ನರ್ತನ ಪಾತ್ರಿಗಳು ಹೊರಗೆ ಇಡುತ್ತಾರೆ. ಆ ನಂತರ ಕೆಲವು ಕಡೆ ಜೋಗಿ ಪುರುಷನಿಗೆ ಕಟ್ಟಲೆಯ ಕೋಲ ನಡೆಯುತ್ತೆ. ಈ ರೀತಿಯಾಗಿ ಯಾವುದೇ ಚ್ಯುತಿ ಬಾರದೆ ದೇವು ಬಲ್ಲಾಳರ ಕಟ್ಲೆಯ ಪ್ರಕಾರ ನೇಮವು ನಿಯಮ ಪ್ರಕಾರವಾಗಿ ನಡೆಯುತ್ತಿದೆ. ಇವತ್ತಿಗೂ ಗರಡಿಗಳು ಭಕ್ತರ ಶ್ರದ್ದಾ ಕೇಂದ್ರವಾಗಿದೆ. ಎಷ್ಟೇ ಆಡಂಬರದ ಗರಡಿಗಳು ಇದ್ದರೂ ಕೂಡ ಕಟ್ಲೆಗಳಲ್ಲಿ ಆಡಂಬರ ಬಂದಿಲ್ಲ ಅದು ಅನಾದಿಯ ನಂಬಿಕೆಯಲ್ಲಿಯೇ ಬೇರೂರುತ್ತಾ ಇದೆ.

ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

Share this post

Recent Posts:

Share this post

Facebook Twitter Whatsapp Linkedin