ಬಿಲ್ಲವರಲ್ಲಿ ನಡೆಯುತ್ತಿದ್ದ ಕೈ ಪತ್ತವುನಿ ಎನ್ನುವ ಕ್ರಮದ ಮದುವೆ

Billavaralli nadeyuttidda kai pattavuni ennuva kramada maduve

Post date: 2020-09-11
ಬಿಲ್ಲವರಲ್ಲಿ ನಡೆಯುತ್ತಿದ್ದ ಕೈ ಪತ್ತವುನಿ ಎನ್ನುವ ಕ್ರಮದ ಮದುವೆ
Avatar

Shailu Birva Agattadi Dola Baarike

ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

ಬಾಕಿಲ ಗುತ್ತು


Recent Posts:

Share this post

ಬಿಲ್ಲವರಲ್ಲಿ ನಡೆಯುತ್ತಿದ್ದ ಕೈ ಪತ್ತವುನಿ ಎನ್ನುವ ಕ್ರಮದ ಮದುವೆ

ದುವೆ ಎನ್ನುವುದು ಎರಡು ಜೀವಗಳನ್ನು ಬೆಸೆಯುವುದರ ಜೊತೆಗೆ ಸಂತಾನಾಭಿವೃದ್ಧಿಯ ದ್ಯೋತಕವು ಹೌದು. ತುಳುನಾಡಿನ ಪ್ರತಿಯೊಂದು ಜಾತಿಗಳು ಅವರದೇ ಆದ ಕ್ರಮಗಳಲ್ಲಿ ಮದುವೆಗಳನ್ನು ನಡೆಸುತ್ತಿದ್ದರು, ಇನ್ನೊಂದು ಜಾತಿ ಬೇರೆ ಜಾತಿಗಳ ಕ್ರಮಗಳಲ್ಲಿ ಮೂಗು ತೂರಿಸಿದ ಉದಾಹರಣೆಗಳು ಇಲ್ಲ. ಮಾತೃ ಪ್ರಧಾನ ಜಾತಿಗಳಾದ ಬಿಲ್ಲವ, ಬಂಟ, ಕುಲಾಲ, ಗಾಣಿಗ ಮತ್ತು ಮೊಗವೀರ ಜಾತಿಗಳಲ್ಲಿ ಸಾಮಾನ್ಯವಾಗಿ ಕೆಲವೊಂದು ಕ್ರಮಗಳನ್ನು ಹೊರತು ಪಡಿಸಿ ಎಲ್ಲಾ ಕ್ರಮಗಳಲ್ಲಿ ಒಂದು ರೀತಿಯ ಹೋಲಿಕೆ ಇತ್ತು. ಬಿಲ್ಲವರು ತಮ್ಮ ಎಲ್ಲಾ ಕ್ರಮಗಳಲ್ಲಿ ತಮ್ಮದೇ ಆದ ಅಧಿಪತ್ಯವನ್ನು ಹೊಂದಿದ್ದವರು. ಎಲ್ಲವೂ ಕೂಡ ಈ‌ ಹಿಂದೆ ಹೇಳಿದಂತೆ ಗುರಿಕಾರನ(ಬೋಂಟ್ರ) ಮುಖಾಂತರ ನಡೆಯುತ್ತಿತ್ತು. ನಾನು ಇಲ್ಲಿ ಹೇಳಹೊರಟಿರುವುದು ವಿಧವೆ ಮತ್ತು ಎರಡನೇ ಮದುವೆಯಾಗ ಹೊರಟ ಗಂಡಿನ ಮದುವೆಯ ಬಗ್ಗೆ.

ಸಾಮಾನ್ಯವಾಗಿ ಮೊದಲನೇ ಮದುವೆಯಾದರೆ ಕೈಧಾರೆ ಬುಡುದಾರೆಗಳ ಕ್ರಮಗಳು ಮಡಿವಾಳರ ಪೌರೋಹಿತ್ಯದಲ್ಲಿ ಆಗುತ್ತಿದ್ದರೆ, ಈ ಕೈ ಪತ್ತವುನಿ ಕ್ರಮದಲ್ಲಿ ಮದುವೆಯಾಗುವ ಸಮಯದಲ್ಲಿ ಮಡಿವಾಳ ಪೌರೋಹಿತ್ಯ ಇರುವುದಿಲ್ಲ. ಎಲ್ಲವೂ ಕೂಡ ಗುರಿಕಾರನ ಮುಂದಾಳತ್ವದಲ್ಲಿ ಕೆಲವೇ ಸಂಬಂಧಿಕರ ಸಮ್ಮಖದಲ್ಲಿ ನಡೆಯುತ್ತಿತ್ತು. ಹೊರಗಿನವರ ಉಪಸ್ಥಿತಿ ಇಲ್ಲಿ ನಿಶಿಧ್ದವಾಗಿತ್ತು. ಮುಖ್ಯವಾಗಿ ಈ ಮದುವೆ ನಡೆಯುತ್ತಿದ್ದಿದ್ದೇ ಸಂಜೆಯ ಇಳಿ ಹೊತ್ತಿನಲ್ಲಿ ಹೆಣ್ಣಿನ ಮನೆಯಲ್ಲಿ. ಗಂಡಿನ ದಿಬ್ಬಣ ಹೆಣ್ಣಿನ ಮನೆಗೆ ಸೂರ್ಯ ಅಸ್ತಮಿಸುವ ಮುನ್ನ ಬಂದು ಸೇರುತ್ತಿತ್ತು. ಮದುವೆಯ ಹೆಣ್ಣು ಈ ಮೊದಲೇ ವಿಧವೆಯಾಗಿರುವುದರಿಂದ ಆಕೆಗೆ ಬೇರೊಬ್ಬರು ಅಲಂಕಾರ ಮಾಡುವ ಕ್ರಮ ಇರಲಿಲ್ಲ. ಆಕೆಯೆ ಒಂದು ಮರದ ಮಣೆಯಲ್ಲಿ ಕುಳಿತು ತನಗೆ ಬೇಕಾದ ಅಲಂಕಾರಗಳನ್ನು ತಾನೇ ಮಾಡಿಕೊಳ್ಳಬೇಕು ಮತ್ತು ಸೀರೆಯು ಕೂಡ ತಾನೇ ಉಟ್ಟುಕೊಳ್ಳಬೇಕು. ಅದೇ ರೀತಿ ಕರಿಮಣಿಯನ್ನು ತಾನೇ ಕಟ್ಟಿಕೊಳ್ಳಬೇಕು, ಸಾಮಾನ್ಯವಾದ ಮದುವೆಯಲ್ಲಿ ಆದರೆ ಹೆಣ್ಣಿನ ತಾಯಿ ಅಥವ ಗುರಿಕಾರ್ತಿ ಕಟ್ಟುವ ಕ್ರಮ ಇರುತ್ತದೆ. ಅದೇ ರೀತಿ ಇಲ್ಲಿ ಗಂಡಿನ ಅಲಂಕಾರದಲ್ಲಿ ಮಾತ್ರ ಈ ರೀತಿಯ ಕಟ್ಟುಪಾಡು ಇರಲಿಲ್ಲ ಆತನಿಗೆ ಕಚ್ಚೆ ಹಾಕಲು ಇನ್ನೊಬ್ಬರ ಸಹಾಯ ಪಡೆದುಕೊಳ್ಳಬಹುದಿತ್ತು.
ಬಿಲ್ಲವ
ದುವೆ ಗಂಡು ಮತ್ತು ಹೆಣ್ಣನ್ನು ಮನೆಯ ಚಾವಡಿಯಲ್ಲಿ ಎದುರು ಬದುರಾಗಿ ನಿಲ್ಲಿಸಿ ಅವರ ಮಧ್ಯದಲ್ಲಿ ಬಿಳಿ‌ ಬಟ್ಟೆಯನ್ನು ಅಡ್ಡವಾಗಿ ಮುಖ ಕಾಣದ ರೀತಿಯಲ್ಲಿ ಹಿಡಿಯುತ್ತಾರೆ, ಅವರ ಮಧ್ಯದಲ್ಲಿ ಗುರಿಕಾರ ನಿಂತು ಹೆಣ್ಣಿನ ಕೈಗೆ ಗಂಡಿನ ಕೈಯನ್ನು ಬಟ್ಟೆಯ ಮೇಲಿಂದ ಹಿಡಿಸುತ್ತಾನೆ. ಕೈಯನ್ನು ಹಿಡಿಸುವಾಗ ಲೆತ್ತ್ ಪನ್ಪುನಿ ಎನ್ನುವ ಕ್ರಮ ಇದೆ. ಅದು ಈ ರೀತಿಯಾಗಿ ಇದೆ. ಜಾತಿ ಸಂಗತೆರೆಡ, ಜಾತಿ ಬುದ್ಯಂತೆರೆಡ ಪೊಣ್ಣನ ಕೈನ್ ಆನನ ಕೈಟ್ ಪತ್ತಾವ ಅಂತ ಮೂರು ಸಲ ಕೂಗಿ ಹೇಳಿ ಕೈ ಹಿಡಿಸುತ್ತಾರೆ. ಇಲ್ಲಿ ಹೆಣ್ಣಿನ ಕಡೆಯ ಗುರಿಕಾರನ ಮೂಲಕ ಈ ಕ್ರಮಗಳು ನಡೆಯುತ್ತವೆ. ನಂತರ ಗಂಡು ಹೆಣ್ಣನ್ನು ಕೂರಿಸಿ ಸೇಸೆ ಹಾಕುತ್ತಾರೆ. ಆದರೆ ಇಲ್ಲಿ ಬಂದವರೆಲ್ಲ ಮುಯ್ಯಿ(ಹಣ ನೀಡುವ ಕ್ರಮ) ಮಾಡುವ ಕ್ರಮ ಇರಲಿಲ್ಲ. ಅದು ಮೊದಲನೇ ಮದುವೆಗೆ ಮಾತ್ರ ಸೀಮಿತವಾಗಿತ್ತು. ಇಲ್ಲಿ ಮದುವೆ ಮಾಡಿಸುವ ಮುಖ್ಯವಾದ ಉದ್ದೇಶ ಏನೆಂದರೆ ಹೆಣ್ಣಿಗೊಂದು ರಕ್ಷಣೆ ಇರಲಿ ಎನ್ನುವ ಉದ್ದೇಶ ಮಾತ್ರ ಆಗಿತ್ತು. ಮತ್ತು ಇದು ಅಷ್ಟೊಂದು ಪ್ರಚಾರವನ್ನು ಪಡೆದುಕೊಳ್ಳದೆ ಕೇವಲ ಕೆಲವೇ ಸಂಬಂಧಿಕರ ಉಪಸ್ಥಿತಿಯಲ್ಲಿ ಆಗುವ ಕ್ರಮಗಳಾಗಿದ್ದವು. ಊಟವು ಅಷ್ಟೆ ಕಡ್ಲೆ ಬಲ್ಯಾರಿನ ಸಮಾರಾಧನೆ ಆಗಿತ್ತು.

ಯಾವುದೇ ಕಾರಣಕ್ಕೂ ಇದನ್ನು ಹಗಲಿನ ಹೊತ್ತಿನಲ್ಲಿ ನಡೆಸುತ್ತಿರಲಿಲ್ಲ. ಆದರೆ ಅಪರೂಪಕ್ಕೆ ಮತ್ತು ಅನುಕೂಲಕ್ಕಾಗಿ ಕೆಲವೊಂದು ಆಗಿದ್ದ ಉದಾಹರಣೆಯು ಇದಿಯಂತೆ. ಇಲ್ಲಿ ಈ ಹಿಂದೆ ಹುಡುಗಿಗೆ ಮೊದಲ ಗಂಡನಲ್ಲಿ ಮಕ್ಕಳಿದಲ್ಲಿ ಆ ಮಕ್ಕಳನ್ನು ಎರಡನೇ ಗಂಡನೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸಾಕುವ ಪರಿಪಾಠವು ಇತ್ತು. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ವಿಧವಾ ವಿವಾಹಕ್ಕೆ ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಇದ್ದಂತಹ ಪ್ರೋತ್ಸಾಹ. ಈಗ ಈ ರೀತಿಯ ಕ್ರಮದ ಅವಶ್ಯಕತೆಯಿಲ್ಲ ಯಾಕೆಂದರೆ ಕ್ರಮಪ್ರಕಾರವಾಗಿ ಎರಡನೇ ಮದುವೆಯು ಕೂಡ ಮೊದಲನೇಯ ಮದುವೆ ರೀತಿಯಲ್ಲೇ ಆಗುತ್ತಿದೆ. ಆದರೆ ಈ ಕೈ ಪತ್ತವುನಿ ಕ್ರಮದ ಮದುವೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯನ್ನು ಕಾಯ್ದುಕೊಂಡಿದೆ.

ಮೂಲ:- ಅಮಣಿ ಅಮ್ಮ ಅಗತ್ತಾಡಿ ದೋಲ ಬಾರಿಕೆ
ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

Share this post

Recent Posts:

Share this post

Facebook Twitter Whatsapp Linkedin